HEALTH TIPS

ಐತಿಹಾಸಿಕ ತುಳು ಶಾಸನವಿರುವ ಗೋಸಾಡ ಶ್ರೀ ಮಹಿಷಮರ್ದಿನಿ ಕ್ಷೇತ್ರದಲ್ಲಿ ತುಳು ಭವನದ ನೇತೃತ್ವದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಜನ್ಮದಿನ, ವಿಶೇಷ ಪೂಜೆ ಸಲ್ಲಿಕೆ

ತುಳು ಭವನದ ವತಿಯಿಂದ ಗೋಸಾಡ ಮಹಿಷಮರ್ದಿನಿ ಕ್ಷೇತ್ರಕ್ಕೆ ಭೇಟಿ; ಧರ್ಮಸೇವೆಯ ಕೊಡುಗೆಯನ್ನು ಸ್ಮರಿಸಿದ ವರ್ಕಾಡಿ ಗಣೇಶ ತಂತ್ರಿಗಳು 


ಬದಿಯಡ್ಕ: ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯರೂ ಆಗಿರುವ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಜನ್ಮದಿನವನ್ನು ಬದಿಯಡ್ಕ ತುಳು ಭವನದ ನೇತೃತ್ವದಲ್ಲಿ ವಿಶೇಷ ರೀತಿಯಲ್ಲಿ ಆಚರಿಸಲಾಯಿತು.

ಈ ಪ್ರಯುಕ್ತ ತುಳು ಭವನದ ಪ್ರತಿನಿಧಿಗಳು ಪುರಾತನ ತುಳು ಲಿಪಿಯ ಶಾಸನವನ್ನು ಹೊಂದಿರುವ ಐತಿಹಾಸಿಕ ಗೋಸಾಡ ಶ್ರೀ ಮಹಿಷಮರ್ದಿನಿ ಕ್ಷೇತ್ರಕ್ಕೆ ತೆರಳಿ, ದೇವಿಗೆ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸುವ ಮೂಲಕ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು. ವರ್ಕಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ವಿಶೇಷ ಧಾರ್ಮಿಕ ವಿಧಿವಿಧಾನಗಳು ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ವರ್ಕಾಡಿ ಗಣೇಶ ತಂತ್ರಿಗಳು, ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಕಾಸರಗೋಡು ಜಿಲ್ಲೆಯ ಮೇಲೆ ಅಪಾರ ಅಭಿಮಾನ ಮತ್ತು ಪ್ರೀತಿ ಹೊಂದಿರುವ ಮಹನೀಯರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಜನಜಾಗೃತಿ, ಸ್ವಾವಲಂಬನೆ, ಸಾಮಾಜಿಕ ಅಭಿವೃದ್ಧಿ ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ ಸಾವಿರಾರು ಕುಟುಂಬಗಳ ಬದುಕಿಗೆ ಬೆಳಕಾಗಿದ್ದಾರೆ ಎಂದು ಹೇಳಿದರು.

ಕಾಸರಗೋಡಿನ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳ ಅಭಿವೃದ್ಧಿಯಲ್ಲಿಯೂ ಹೆಗ್ಗಡೆಯವರ ಕೊಡುಗೆ ಸ್ಮರಣೀಯವಾಗಿದೆ. ಈ ಭಾಗದ ವಿವಿಧ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಅವರು ನೀಡಿರುವ ಮಾರ್ಗದರ್ಶನ ಮತ್ತು ಸಹಕಾರ ಶ್ಲಾಘನೀಯ. ಗೋಸಾಡ ಶ್ರೀ ಮಹಿಷಮರ್ದಿನಿ ಕ್ಷೇತ್ರವು ಪುರಾತನ ತುಳು ಲಿಪಿಯ ಶಾಸನವನ್ನು ಹೊಂದಿರುವ ವಿಶೇಷ ಐತಿಹಾಸಿಕ ಮಹತ್ವದ ಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಭೇಟಿ ನೀಡಿ ಮಾರ್ಗದರ್ಶನ ನೀಡಿದ್ದನ್ನು ಸ್ಮರಿಸಬಹುದು ಎಂದರು.

ಪ್ರಸ್ತುತ ಕ್ಷೇತ್ರದಲ್ಲಿ ಭೂತಬಲಿ ಉತ್ಸವ ನಡೆಯುತ್ತಿರುವ ಶುಭ ಸಂದರ್ಭದಲ್ಲಿ ತುಳು ಭವನದ ಪ್ರತಿನಿಧಿಗಳು ಆಗಮಿಸಿ ಶ್ರೀ ಮಹಿಷಮರ್ದಿನಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಪೂಜ್ಯರ ಜನ್ಮದಿನವನ್ನು ಆಚರಿಸಿರುವುದು ಅತ್ಯಂತ ಪ್ರಶಂಸನೀಯ ಕಾರ್ಯವಾಗಿದೆ. ಸಮಾಜಸೇವೆ, ಧಾರ್ಮಿಕ ಸೇವೆ ಹಾಗೂ ಜನಪರ ಕಾರ್ಯಗಳ ಮೂಲಕ ಇನ್ನಷ್ಟು ಜನರಿಗೆ ನೆರವಾಗುವ ಭಾಗ್ಯವನ್ನು ದೇವಿಯು ಅವರಿಗೆ ಕರುಣಿಸಲಿ. ಅವರ ಸೇವಾ ಪಯಣ ನಿರಂತರವಾಗಿ ಮುಂದುವರಿಯಲಿ ಎಂದು ಪ್ರಾರ್ಥಿಸಿದರು.

ತುಳು ಭಾಷೆ, ಲಿಪಿ, ಸಂಸ್ಕೃತಿ ಹಾಗೂ ಐತಿಹಾಸಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ತುಳು ಭವನದ ವತಿಯಿಂದ ಇಂತಹ ಐತಿಹಾಸಿಕ ಕ್ಷೇತ್ರಕ್ಕೆ ಭೇಟಿ ನೀಡಿ ಧಾರ್ಮಿಕ ಕಾರ್ಯಕ್ರಮದ ಮೂಲಕ ಜನ್ಮದಿನ ಆಚರಿಸಿರುವುದು ವಿಶೇಷ ಮಹತ್ವ ಪಡೆದುಕೊಂಡಿತು. ತುಳು ಶಾಸನಗಳಿರುವ ಪುರಾತನ ಕ್ಷೇತ್ರಗಳ ಪರಿಚಯ ಮತ್ತು ಅವುಗಳ ಮಹತ್ವವನ್ನು ಮುಂದಿನ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿಯೂ ಈ ಭೇಟಿ ಗಮನಾರ್ಹವೆನಿಸಿತು.

ಈ ಸಂದರ್ಭದಲ್ಲಿ ತುಳು ಭವನದ ಸ್ಥಾಪಕರು ಹಾಗೂ ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷರಾದ ಅಖಿಲೇಶ್ ನಗುಮುಗಂ, ಜನಜಾಗೃತಿ ವೇದಿಕೆಯ ಸದಸ್ಯರಾದ ಹರೀಶ್ ಗೋಸಾಡ, ನಾರಾಯಣ ಗೋಸಾಡ, ಶ್ರೀ ಕ್ಷೇತ್ರದ ಅನುವಂಶಿಕ ಮೊಕ್ತೇಸರರಾದ ಶ್ರೀನಿವಾಸ ಅಮ್ಮಣ್ಣಾಯ ಪಾವೂರು, ಶ್ರೀ ಕ್ಷೇತ್ರ ಸೇವಾ ಸಮಿತಿಯ ಅಧ್ಯಕ್ಷರಾದ ಪ್ರಸಾದ್ ಮಣಿಯಾಣಿ, ಪ್ರಧಾನ ಕಾರ್ಯದರ್ಶಿ ರವೀಂದ್ರ ರೈ ಗೋಸಾಡ, ಕಾರ್ಯದರ್ಶಿ ಸದಾಶಿವ ರೈ ಗೋಸಾಡ, ಅಮೃತ್ ರಾಜ್ ಮರತ್ತಿಲ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ದೀರ್ಘಾಯುಷ್ಯ, ಆರೋಗ್ಯ ಹಾಗೂ ನಿರಂತರ ಸಮಾಜಸೇವೆಗೆ ದೇವಿಯ ಅನುಗ್ರಹ ದೊರೆಯಲಿ ಎಂಬ ಸಾಮೂಹಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ನೆರವೇರಿತು.





 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries