ಬದಿಯಡ್ಕ: ಇತ್ತೀಚೆಗೆ ಅಡೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಕುಂಬಳೆ ಉಪಜಿಲ್ಲಾ ಮಟ್ಟದ ಶಾಸ್ತ್ರೋತ್ಸವದಲ್ಲಿ ನೀರ್ಚಾಲಿನ ಮಹಾಜನ ಸಂಸ್ಕೃತ ಕಾಲೇಜು ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಗಮನಾರ್ಹ ಸಾಧನೆ ಮಾಡುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ. ವೃತ್ತಿ ಪರಿಚಯ ಮೇಳದ ಎಂಬ್ರಾಯ್ಡರಿ ಸ್ಪರ್ಧೆಯಲ್ಲಿ ಹಂಶಿಕಾ, ಸ್ಟಫ್ಡ್ ಟಾಯ್ಸ್ ಸ್ಪರ್ಧೆಯಲ್ಲಿ ದೀಪಶಿಖಾ ಹಾಗೂ ಗಣಿತ ಮೇಳದ ನಂಬರ್ ಚಾರ್ಟ್ ಸ್ಪರ್ಧೆಯಲ್ಲಿ ಅವಿಶ್ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ.
ಶಾಲಾ ಕಲೋತ್ಸವದಲ್ಲಿ ವಿದ್ಯಾರ್ಥಿಗಳ ಸಾಧನೆ: ಬದಿಯಡ್ಕದ ನವಜೀವನ ಪ್ರೌಢಶಾಲೆಯಲ್ಲಿ ನಡೆದ ಕುಂಬಳೆ ಉಪಜಿಲ್ಲಾ ಮಟ್ಟದ ಕಲೋತ್ಸವದಲ್ಲಿಯೂ ಇಲ್ಲಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಯನ್ನು ಮಾಡಿದ್ದಾರೆ. ಎಲ್.ಪಿ. ವಿಭಾಗದ ಸ್ಪರ್ಧೆಗಳಲ್ಲಿ ರನ್ನರ್ ಅಪ್ ಚಾಂಪಿಯನ್‌ಶಿಪ್ ಹಾಗೂ ಕನ್ನಡ ವಿಭಾಗದ ಸ್ಪರ್ಧೆಗಳಲ್ಲಿಯೂ ರನ್ನರ್ ಅಪ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಪಡೆದು ಶಾಲೆಯ ಕಲಾ ಪ್ರತಿಭೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಒಗಟು ಸ್ಪರ್ಧೆಯಲ್ಲಿ ಚಿನ್ಮಯಕೃಷ್ಣ ಪ್ರಥಮ ಸ್ಥಾನ ಗಳಿಸಿದರೆ, ಸಂಘನೃತ್ಯದಲ್ಲಿ ದ್ವಿತೀಯ ಸ್ಥಾನ ಹಾಗೂ ಭರತನಾಟ್ಯದಲ್ಲಿ ಸ್ವರಾಧ್ಯ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಕಳೆದ ಐದು ವರ್ಷಗಳಿಂದಲೂ ಕಲೋತ್ಸವದಲ್ಲಿ ಶಾಲೆಯ ವಿದ್ಯಾರ್ಥಿಗಳು ಚಾಂಪಿಯನ್‌ಶಿಪ್ ಹಾಗೂ ರನ್ನರ್ ಅಪ್ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಳ್ಳುವ ಮೂಲಕ ಸತತ ಸಾಧನೆಯ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಹಾಗೂ ರಕ್ಷಕ-ಶಿಕ್ಷಕ ಸಂಘ ಅಭಿನಂದಿಸಿದ್ದಾರೆ.

.jpg)
.jpg)
