ಶ್ರೀ ಗಣೇಶ ಮಂದಿರ ರಕ್ಷಣೆಗೆ ಬೃಹತ್ ಹಿಂದೂ ಶಕ್ತಿ ಸಂಗಮ; ಮಂದಿರ ತೆರವಿಗೆ ಮುಂದಾದರೆ ಪ್ರತಿರೋಧದ ಎಚ್ಚರಿಕೆ
ಮಂಜೇಶ್ವರ: ನಿದ್ರೆಯಲ್ಲಿದ್ದ ಹಿಂದೂ ಸಮಾಜ ಯಾವಾಗಲೋ ಎದ್ದಾಗಿದೆ. ಇದೀಗ ಹಿಂದೂ ಸಮಾಜ ಸುದೃಢಗೊಂಡಿದ್ದು, ದಿನದ 24 ಗಂಟೆಯೂ ಎಚ್ಚೆತ್ತುಕೊಂಡು ಕಾರ್ಯಪ್ರವೃತ್ತವಾಗಿದೆ. ಆದ್ದರಿಂದ ಅನ್ಯಮತೀಯರು ಹಿಂದೂ ಸಮಾಜದ ಹಾಗೂ ಹಿಂದೂ ದೇವಾಲಯಗಳ ವಿರುದ್ಧ ಯಾವುದೇ ಷಡ್ಯಂತ್ರಗಳನ್ನು ನಡೆಸಿದರೂ ಸಮರ್ಥವಾಗಿ ಎದುರಿಸಲು ನಾವು ತಯಾರಿದ್ದೇವೆ ಎಂದು ಗುರುಪುರ ವಜ್ರದೇಹಿ ಮಠಾಧೀಶರಾದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.
ಜೋಡುಕಲ್ಲು ಶ್ರೀ ಗಣೇಶ ಮಂದಿರ ಸಂರಕ್ಷಣಾ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ಜೋಡುಕಲ್ಲು ಜಂಕ್ಷನ್‌ನಲ್ಲಿ ಭಾನುವಾರ ಸಂಜೆ ನಡೆದ 'ಧರ್ಮ ಸಂಸ್ಥಾಪನಾಯ ಜೋಡುಕಲ್ಲು ಚಲೋ' ಜಾಗೃತ ಹಿಂದೂ ಶಕ್ತಿ ಸಂಗಮ ಬೃಹತ್ ಸಮಾವೇಶದಲ್ಲಿ ಅವರು ಆಶೀರ್ವಚನ ನೀಡಿದರು. ಹಿಂದೂಗಳ ತಾಳ್ಮೆ ಮತ್ತು ಸೌಹಾರ್ದತೆಯನ್ನು ದುರ್ಬಲತೆ ಎಂದು ಭಾವಿಸಿ ಶ್ರೀ ಗಣೇಶ ಮಂದಿರವನ್ನು ಒಡೆದು ತೆಗೆಯಲು ಯತ್ನಿಸಿದರೆ ಮುಂದಕ್ಕೆ ಬಹುದೊಡ್ಡ ಆಂದೋಲನ ರೂಪಿಸಲಾಗುವುದು ಎಂದು ಎಚ್ಚರಿಸಿದ ಅವರು, ಕೇರಳ ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯನ್ನು ಹಿಂಪಡೆದು ಈ ಪ್ರಕರಣವನ್ನು ಸೌಹಾರ್ದಯುತವಾಗಿ ಇತ್ಯರ್ಥಗೊಳಿಸಲು ಮುಸ್ಲಿಂ ಲೀಗ್ ಹಾಗೂ ಜಿಲ್ಲಾಡಳಿತ ಮುಂದಾಗಬೇಕು ಎಂದು ಸಲಹೆ ನೀಡಿದರು.
ಮುಸ್ಲಿಂ ಲೀಗ್‌ನಿಂದ ದೇಶದ್ರೋಹದ ಕೆಲಸ: ಡಾ. ಕಲ್ಲಡ್ಕ ಪ್ರಭಾಕರ ಭಟ್
ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್, ಜೋಡುಕಲ್ಲಿನಲ್ಲಿ ಇಷ್ಟೊಂದು ಬೃಹತ್ ಸಂಖ್ಯೆಯಲ್ಲಿ ಹಿಂದೂಗಳು ಒಗ್ಗೂಡಲು ಕಾರಣವಾದ ಮುಸ್ಲಿಂ ಲೀಗ್‌ನ ಷಡ್ಯಂತ್ರಕ್ಕೆ ಕೃತಜ್ಞತೆ ಸಲ್ಲಿಸಬೇಕು ಎಂದು ವ್ಯಂಗ್ಯವಾಡಿದರು. ಮುಸ್ಲಿಂ ಲೀಗ್ ದೇಶದ್ರೋಹಿ ಪಕ್ಷವಾಗಿದ್ದು, ಲವ್ ಜಿಹಾದ್, ಲ್ಯಾಂಡ್ ಜಿಹಾದ್ ಮೊದಲಾದವುಗಳ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದರು. ಕೇವಲ 27 ಸೆಂಟ್ಸ್ ಜಾಗದ ವಿಚಾರದಲ್ಲಿ ತಕರಾರು ತೆಗೆಯಲಾಗಿದ್ದು, ಸರ್ಕಾರಿ ಭೂಮಿಯಲ್ಲಿರುವ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲು ಸರ್ಕಾರ ಮೊದಲು ಆದ್ಯತೆ ನೀಡಲಿ ಎಂದರು.
ಕುತಂತ್ರಗಳಿಗೆ ದಿಟ್ಟ ಉತ್ತರ: ವಲ್ಸನ್ ತಿಲ್ಲಂಗೇರಿ
ಹಿಂದೂ ಐಕ್ಯ ವೇದಿಕೆಯ ಕೇರಳ ರಾಜ್ಯ ಉಪಾಧ್ಯಕ್ಷ ವಲ್ಸನ್ ತಿಲ್ಲಂಗೇರಿ ಮಾತನಾಡಿ, ಗಣೇಶ ಮಂದಿರದ ಹೆಸರಿನಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸಿದರೆ ತಕ್ಕ ಉತ್ತರ ನೀಡಲಾಗುವುದು ಎಂದು ಎಚ್ಚರಿಸಿದರು. 500 ವರ್ಷಗಳ ಬಳಿಕ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಿದ ಸಮಾಜವಿದು; ಪಿಡಬ್ಲ್ಯುಡಿ ಜಾಗ ಎಂಬ ನೆಪವೊಡ್ಡಿ ಗಣೇಶ ಮಂದಿರವನ್ನು ತೆರವುಗೊಳಿಸಲು ಬಂದರೆ ಎದುರಾಗುವ ಯಾವುದೇ ಅನಾಹುತಗಳಿಗೆ ಜಿಲ್ಲಾಡಳಿತವೇ ಹೊಣೆಯಾಗಬೇಕಾಗುತ್ತದೆ ಎಂದರು.
ಯಾವುದೇ ಅನಾಹುತ ಸಂಭವಿಸಿದರೆ ಆಡಳಿತವೇ ಹೊಣೆ: ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂರಕ್ಷಣಾ ಕ್ರಿಯಾ ಸಮಿತಿ ಅಧ್ಯಕ್ಷ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಮಾತನಾಡಿ, ಯಾವುದೇ ಕಾರಣಕ್ಕೂ ಜೋಡುಕಲ್ಲು ಶ್ರೀ ಗಣೇಶ ಮಂದಿರದ ಚಪ್ಪರವನ್ನು ತೆರವುಗೊಳಿಸಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಜಿಲ್ಲಾಧಿಕಾರಿಗಳ ಕಚೇರಿಗೆ ನಿಯೋಗ ತೆರಳಿದಾಗ ಅವಮಾನಿಸಿ ಕಳುಹಿಸಲಾಗಿದೆ; ಆದರೆ ಹಿಂದೂ ಸಮಾಜ ಇಂತಹ ಹೆದರಿಕೆಗಳಿಗೆ ಮಣಿಯುವುದಿಲ್ಲ ಎಂದು ತಿಳಿಸಿದರು.
ವೇದಿಕೆಯಲ್ಲಿ ಹೇಮಾವತಿ ಎನ್. ರಾವ್ ಕಾಯರ್‌ಕಟ್ಟೆ ಉಪಸ್ಥಿತರಿದ್ದರು. ಕಿಶೋರ್ ಪೆರ್ಲ ವಂದೇ ಮಾತರಂ ಗೀತೆ ಹಾಡಿದರು. ಹಿಂದೂ ಐಕ್ಯ ವೇದಿಕೆಯ ಕಾಸರಗೋಡು ಜಿಲ್ಲಾಧ್ಯಕ್ಷ ಎಸ್.ಪಿ. ಶಾಜಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ರಾಜನ್ ಮುಳಿಯಾರು ಪ್ರತಿಜ್ಞಾವಿಧಿ ಬೋಧಿಸಿದರು. ವೆಂಕಪ್ಪ ಶೆಟ್ಟಿ ಮಾಸ್ಟರ್ ಕಯ್ಯಾರು ವಂದಿಸಿದರು. ಮಂಜುನಾಥ ಸೊಂಪಿ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ, ಗೋಪೂಜೆ ಹಾಗೂ ಭಜನಾ ಕಾರ್ಯಕ್ರಮಗಳು ನೆರವೇರಿದವು. ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಿ ಧರ್ಮ ರಕ್ಷಾ ಸಮಿತಿ ಐಲ-ಉಪ್ಪಳ ವತಿಯಿಂದ ಐಲ ದುರ್ಗಾಪರಮೇಶ್ವರಿ ದೇವಸ್ಥಾನದ ಪರಿಸರದಿಂದ ಬೃಹತ್ ಬೈಕ್ ರ‍್ಯಾಲಿ ನಡೆಯಿತು.




