ಶೆನ್‌ಝೆನ್/ಬೀಜಿಂಗ್: ಅಮೆರಿಕ ಮತ್ತು ಚೀನಾ ಸೂಪರ್ ಇಂಟೆಲಿಜೆನ್ಸ್‌ನಲ್ಲಿ ಬಹಳಷ್ಟು ಆಸಕ್ತಿ ಹೊಂದಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಚೀನಾದ ಶೆನ್‌ಝೆನ್‌ನಲ್ಲಿ ನಡೆದ ಏಷ್ಯಾ–ಪೆಸಿಫಿಕ್ ಆರ್ಥಿಕ ಸಹಕಾರ (ಎಪಿಇಸಿ) ಶೃಂಗಸಭೆ ವೇಳೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಮತ್ತು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ಸೂಪರ್ ಇಂಟೆಲಿಜೆನ್ಸ್ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದೇವೆ.
ಈ ತಂತ್ರಜ್ಞಾನಕ್ಕೆ ಕನಿಷ್ಠ ಮಟ್ಟದ ಸುರಕ್ಷತಾ ನಿಯಮಗಳ ಅಗತ್ಯವಿದೆ ಎಂಬುದಕ್ಕೆ ಇಬ್ಬರೂ ನಾಯಕರು ಸಹಮತ ವ್ಯಕ್ತಪಡಿಸಿದ್ದೇವೆ’ ಎಂದು ತಿಳಿಸಿದ್ದಾರೆ.
‘ಕೃತಕ ಬುದ್ಧಿಮತ್ತೆಯ (ಎಐ) ಸುತ್ತ ಮೂಲಭೂತ ಸುರಕ್ಷತಾ ಕ್ರಮಗಳನ್ನು ಪರಿಚಯಿಸುವ ಆಲೋಚನೆಯನ್ನು ಇಬ್ಬರೂ ನಾಯಕರು ಬೆಂಬಲಿಸಿದ್ದೇವೆ’ ಎಂದೂ ವಿವರಿಸಿದ್ದಾರೆ.
ಆದಾಗ್ಯೂ, ಸುರಕ್ಷತಾ ನಿಯಮಗಳ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಟ್ರಂಪ್, ‘ನಾವು ನಿರ್ದಿಷ್ಟ ವ್ಯಾಖ್ಯಾನಗಳು ಅಥವಾ ವಿವರಗಳ ಬಗ್ಗೆ ಚರ್ಚಿಸಿಲ್ಲ’ ಎಂದಿದ್ದಾರೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಗುರುವಾರ ಚೀನಾದಲ್ಲಿ ತ್ರಿಪಕ್ಷೀಯ ಸಭೆ ನಡೆಸಿ ವಿಶ್ವಶಾಂತಿ, ಅಣ್ವಸ್ತ್ರ ನಿಯಂತ್ರಣ ಸೇರಿದಂತೆ ಹಲವು ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆ.
ಜಗತ್ತಿನ 3 ಬಲಾಢ್ಯ ದೇಶಗಳ ನಾಯಕರು ಹೀಗೆ ಭೇಟಿಯಾಗಿ ಮಾತುಕತೆ ನಡೆಸಿರುವುದು ಜಾಗತಿಕವಾಗಿ ಮಹತ್ವದ ಬೆಳವಣಿಗೆಯಾಗಿದೆ. ವಿಶ್ವಸಂಸ್ಥೆಯ ಸುಧಾರಣೆ ಹಾಗೂ ಇಂಧನ ಬಿಕ್ಕಟ್ಟು ಕಡಿಮೆ ಮಾಡಲು ಸಂಸ್ಕರಿಸಿದ ಪೆಟ್ರೋಲಿಯಂ ಉತ್ಪನ್ನಗಳ ಉತ್ಪಾದನೆ ಮತ್ತು ಪೂರೈಕೆ ಹೆಚ್ಚಿಸುವ ಯೋಜನೆಗಳ ಕುರಿತ ಮಾತುಕತೆಗಳು ಈ ತ್ರಿಪಕ್ಷೀಯ ಸಭೆಯಲ್ಲಿ ನಡೆದಿವೆ.
ಶೃಂಗಸಭೆ ವೇಳೆಯಲ್ಲಿ ಈ ಮೂವರು ನಾಯಕರು ಸುಮಾರು 90 ನಿಮಿಷಗಳವರೆಗೆ ಸಭೆ ನಡೆಸಿದ್ದಾರೆ.



