ಉಪ್ಪಳ:37 ವರ್ಷಗಳಿಂದ ನಿರಂತರವಾಗಿ ಸಾರ್ವಜನಿಕ ಶ್ರೀ ಗಣೇಶೋತ್ಸವ, ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಶಬರಿಮಲೆ ಮಾಲಾಧಾರಣೆ ಮುಂತಾದ ಧಾರ್ಮಿಕ ಆಚರಣೆಗಳು ನಡೆಯುತ್ತಿರುವ ಜೋಡುಕಲ್ಲು ಪ್ರದೇಶದಲ್ಲಿ, ಮುಸ್ಲಿಂ ಲೀಗ್ ದೂರಿನ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆ ಮತ್ತು ಪೆÇಲೀಸರು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಆರೋಪಿಸಿದೆ. ಸಾಮರಸ್ಯದಿಂದ ಶಾಂತಿಯುತವಾಗಿರುವ ತುಳುನಾಡಿನಲ್ಲಿ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೆಲಸವನ್ನು ಮುಸ್ಲಿಂ ಲೀಗ್ ವ್ಯವಸ್ಥಿತ ಅಜೆಂಡಾದ ಭಾಗವಾಗಿ ಮಾಡುತ್ತಿದೆ ಎಂದು ಮುಖಂಡರು ದೂರಿದ್ದಾರೆ.
ಸರ್ಕಾರವು ಭಕ್ತರ ಮೇಲೆ ದಬ್ಬಾಳಿಕೆ ನಡೆಸುವುದನ್ನು ಕೈಬಿಟ್ಟು, ಅವರ ಭಾವನೆಗಳಿಗೆ ಸ್ಪಂದಿಸಿ ಸೌಹಾರ್ದಯುತವಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಬಿಜೆಪಿ ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ. ಆಗ್ರಹಿಸಿದ್ದಾರೆ.
ಇದೇ ವೇಳೆ, ಜೋಡುಕಲ್ಲು ಶ್ರೀ ಗಣೇಶ ಮಂದಿರದ ರಕ್ಷಣೆಗೆ ವಿಶ್ವ ಹಿಂದೂ ಪರಿಷತ್ ಬದ್ಧವಾಗಿದೆ ಎಂದು ವಿಹಿಂಪ ಮಂಜೇಶ್ವರ ಪ್ರಖಂಡ ಕಾರ್ಯದರ್ಶಿ ರಂಜಿತ್ ಕೋಡಿಬೈಲು ತಿಳಿಸಿದ್ದಾರೆ. ಯಾವುದೇ ಕಾರಣಕ್ಕೂ ಮಂದಿರವನ್ನು ತೆರವುಗೊಳಿಸಲು ಬಿಡುವುದಿಲ್ಲ ಎಂದೂ ಅವರು ಎಚ್ಚರಿಸಿದ್ದಾರೆ.

