ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯಕಾಂತ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಮಾಡಲಾಗಿದ್ದ ಪೋಸ್ಟ್ ಗೆ ಸಂಬಂಧಿಸಿದಂತೆ, ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ವಿರುದ್ಧ ನ್ಯಾಯಾಂಗ ನಿಂದನೆ ಕ್ರಮಗಳನ್ನು ಕೋರಿ ಸಲ್ಲಿಸಲಾದ ದೂರಿನ ಆಧಾರದಲ್ಲಿ ಸರ್ವೋಚ್ಚ ನ್ಯಾಯಾಲಯವು ಅರ್ಜಿಯೊಂದನ್ನು ನೋಂದಾಯಿಸಿದೆ.
ಸುಪ್ರೀಂ ಕೋರ್ಟ್ ವೆಬ್ಸೈಟ್ ಪ್ರಕಾರ, ಅ.13ರಂದು ವಕೀಲ ವಿನೀತ್ ಜಿಂದಾಲ್ ಅವರು CJIಗೆ ನೀಡಿದ್ದ ದೂರನ್ನು ಅ.30ರಂದು ರಿಟ್ ಅರ್ಜಿಯಾಗಿ ದಾಖಲಿಸಲಾಗಿದೆ.
ಅಕ್ಟೋಬರ್ 12ರ ಸಂಜೆ ರಾಹುಲ್ ಗಾಂಧಿ ಮತ್ತು ಇತರ ರಾಜಕೀಯ ನಾಯಕರು ಸೇರಿದಂತೆ ಸರ್ವೋಚ್ಚ ನ್ಯಾಯಾಲಯದ ಆವರಣದಲ್ಲಿ ನಡೆದಿದ್ದ ರಾಜಕೀಯ ಪ್ರತಿಭಟನೆ ಮತ್ತು ಘೋಷಣೆ ಕೂಗುವಿಕೆಯು ಯಾವುದೇ ಅನುಮತಿ ಇಲ್ಲದೆ ನಡೆದಿತ್ತೇ ಅಥವಾ ವಕೀಲರು, ಕಕ್ಷಿದಾರರು, ನ್ಯಾಯಾಂಗ ಅಧಿಕಾರಿಗಳು ಮತ್ತು ಕೋರ್ಟ್ ಸಿಬ್ಬಂದಿಯ ಚಲನವಲನಕ್ಕೆ ಯಾವುದೇ ಅಡಚಣೆಯನ್ನುಂಟು ಮಾಡಿತ್ತೇ ಎನ್ನುವುದನ್ನು ಪರಿಶೀಲಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ದೂರಿನಲ್ಲಿ ಕೋರಲಾಗಿದೆ.
ಕೇರಳಂ ಕಾಂಗ್ರೆಸ್ನ ಅಧಿಕೃತ ಎಕ್ಸ್ ಖಾತೆಯಿಂದ CJI ವಿರುದ್ಧ ಮಾಡಲಾಗಿದ್ದ ಪೋಸ್ಟ್ ಅ.12ರಂದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗೆ ಗುರಿಯಾದ ನಂತರ ಅದನ್ನು ಅಳಿಸಲಾಗಿತ್ತು. ಬಳಿಕ ಪಕ್ಷವು ಇದಕ್ಕೆ ಕಾರಣನಾಗಿದ್ದ ವ್ಯಕ್ತಿಯನ್ನು ಹುದ್ದೆಯಿಂದ ತೆಗೆದುಹಾಕಿದೆ.
ಪಕ್ಷದ ಅಧಿಕೃತ ಎಕ್ಸ್ ಖಾತೆಯಲ್ಲಿ CJI ವಿರುದ್ಧ ವಿವಾದಾತ್ಮಕ ಸಂದೇಶವನ್ನು ಪೋಸ್ಟ್ ಮಾಡಿದ ವ್ಯಕ್ತಿಯನ್ನು ಆ ಜವಾಬ್ದಾರಿಯಿಂದ ತೆಗೆದುಹಾಕಲಾಗಿದೆ ಎಂದು KPCC ಅಧ್ಯಕ್ಷ ಸನ್ನಿ ಜೋಸೆಫ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
KPCC ನಾಯಕತ್ವಕ್ಕೆ ಅರಿವಿಲ್ಲದೆ, ಸಮ್ಮತಿ ಅಥವಾ ಸಮಾಲೋಚನೆ ಇಲ್ಲದೆ ಈ ಪೋಸ್ಟ್ ಮಾಡಲಾಗಿತ್ತು ಎಂದು ಹೇಳಿರುವ ಜೋಸೆಫ್, ನ್ಯಾಯಾಂಗದ ನಿಷ್ಪಕ್ಷಪಾತತೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.



