ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 10, 2017
ಭಾರತ ಪ್ರವಾಸ ನಿಮಿತ್ತ ಕೋಲ್ಕತಾಗೆ ಆಗಮಿಸಿದ ಶ್ರೀಲಂಕಾ ಕ್ರಿಕೆಟ್ ತಂಡ!
ಕೋಲ್ಕತಾ: ಭಾರತ ಪ್ರವಾಸ ನಿಮಿತ್ತ ನಾಯಕ ದಿನೇಶ್ ಚಾಂಡಿಮಲ್ ನೇತೃತ್ವದ ಶ್ರೀಲಂಕಾ ಕ್ರಿಕೆಟ್ ತಂಡ ಬುಧವಾರ ಕೋಲ್ಕತಾಗೆ ಆಗಮಿಸಿದೆ.
ಪಶ್ಚಿಮ ಬಂಗಾಳದ ಕೋಲ್ಕತಾ ವಿಮಾನ ನಿಲ್ದಾಣಕ್ಕೆ ಬುಧವಾರ ಶ್ರೀಲಂಕಾ ಕ್ರಿಕೆಟ್ ತಂಡದ ನಾಯಕ ದಿನೇಶ್ ಚಾಂಡಿಮಲ್ ನೇತೃತ್ವದಲ್ಲಿ ಒಟ್ಟು 15 ಕ್ರಿಕೆಟಿಗರು ಆಗಮಿಸಿದ್ದು, ಭಾರತದಲ್ಲಿ ಒಟ್ಟು 3 ಟೆಸ್ಟ್ ಪಂದ್ಯ, 3 ಏಕದಿನ ಪಂದ್ಯ ಹಾಗೂ 3 ಟಿ20 ಪಂದ್ಯಗಳ ಸರಣಿಯನ್ನಾಡಲಿದೆ. ಇದೇ ನವೆಂಬರ್ 16ರಿಂದ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಅದಕ್ಕೂ ಮೊದಲು ಅಂದರೆ ನವೆಂಬರ್ 11ರಂದು ಶ್ರೀಲಂಕಾ ತಂಡ ಅಧ್ಯಕ್ಷರ ಇಲೆವನ್ ತಂಡದ ವಿರುದ್ಧ 2 ದಿನಗಳ ಅಭ್ಯಾಸ ಪಂದ್ಯವನ್ನಾಡಲಿದೆ.
ಇನ್ನು 2ನೇ ಟೆಸ್ಟ್ ಪಂದ್ಯ ನವೆಂಬರ್ 24 ರಿಂದ ಹಾಗೂ 3ನೇ ಟೆಸ್ಟ್ ಡಿಸೆಂಬರ್ 2ರಂದು ನಡೆಯಲಿದೆ. ಬಳಿಕ ಶ್ರೀಲಂಕಾ ತಂಡ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲಿದ್ದು, ಡಿಸೆಂಬರ್ 10, 13 ಮತ್ತು 17ರಂದು ಏಕದಿನ ಪಂದ್ಯಗಳ ಸರಣಿ ನಡೆಯಲಿದೆ.
ಇನ್ನು ಶ್ರೀಲಂಕಾ ವಿರುದ್ಧದ ಸರಣಿಗೆ ಭಾರತ ತಂಡವನ್ನು ಇನ್ನಷ್ಟೇ ಪ್ರಕಟ ಮಾಡಬೇಕಿದೆ. 2017ರಲ್ಲಿ ಭಾರತ ತಂಡ ತಾನಾಡಿರುವ ಎಲ್ಲ ಸರಣಿಗಳಲ್ಲೂ ಜಯ ಸಾಧಿಸಿದ್ದು, ಇತ್ತೀಚೆಗೆ ಮುಕ್ತಾಯವಾದ ನ್ಯೂಜಿಲೆಂಡ್ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಗಳನ್ನು ತನ್ನ ಕೈವಶ ಮಾಡಿಕೊಂಡು ಆತ್ಮ ವಿಶ್ವಾಸದಿಂದಿದೆ. ಅಂತೆಯೇ ಈ ಹಿಂದೆ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಭಾರತ ಲಂಕಾ ವಿರುದ್ಧದ ಇಡೀ ಪ್ರವಾಸವನ್ನೇ ವೈಟ್ ವಾಶ್ ಮಾಡುವ ಮೂಲಕ ಅಮೋಘ ಜಯಭೇರಿ ಭಾರಿಸಿತ್ತು. ಅದೇ ಪ್ರದರ್ಶನವನ್ನು ಭಾರತ ತಂಡ ಮುಂದುವರೆಸುವ ವಿಶ್ವಾಸವಿದ್ದು, ಈ ಭಾರಿಯ ಭಾರತ ಪ್ರವಾಸ ಕೂಡ ಲಂಕಾ ತಂಡಕ್ಕೆ ಕಬ್ಬಿಣದ ಕಡಲೆಯಾಗಲಿದೆ.


