ಮಿಂಚಿನ ಕಾರ್ಯಾಚರಣೆ : 5 ದಿನಗಳಲ್ಲಿ990 ವಾಹನಗಳ ವಶ, 4.56 ಲಕ್ಷ ರೂ. ದಂಡ ವಸೂಲಿ
0
ಡಿಸೆಂಬರ್ 06, 2018
ಕಾಸರಗೋಡು: ಪೊಲೀಸರು, ಮೋಟಾರುವಾಹನ ಇಲಾಖೆ, ಕಂದಾಯ ಇಲಾಖೆ ಜಂಟಿ ವತಿಯಿಂದ ನಡೆಸಲಾಗುತ್ತಿರುವ ಮಿಂಚಿನ ವಾಹನ ತಪಾಸಣೆ ಕಾರ್ಯಾಚರಣೆಯ ಫಲವಾಗಿ 5 ದಿನದ ಅವಧಿಯಲ್ಲಿ ಕಾನೂನು ಉಲ್ಲಂಘಿಸಿ ಸಂಚಾರ ನಡೆಸುತ್ತಿದ್ದ 990 ವಾಹನಗಳನ್ನು ವಶಪಡಿಸಲಾಗಿದ್ದು, 4.56 ಲಕ್ಷ ರೂ. ದಂಡರೂಪದಲ್ಲಿ ಸಂಗ್ರಹಿಸಲಾಗಿದೆ. ಗುರುವಾರ ನಡೆಸಿದ ಗಣನೆಯಲ್ಲಿ ಈ ವಿಚಾರ ಸ್ಪಷ್ಟಗೊಂಡಿದೆ.
ರಸ್ತೆ ಅಪಘಾತ ನಿಯಂತ್ರಣ ಉದ್ದೇಶದಿಂದ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ವಿಶೇಷ ಆದೇಶ ಮೇರೆಗೆ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ಜಂಟಿ ಕಾರ್ಯಾಚರಣೆ ಮೂಲಕ ಕಳೆದ 5 ದಿನಗಳಿಂದ ನಡೆಸಿಕೊಂಡು ಬರುತ್ತಿರುವ ವಾಹನತಪಾಸಣೆ ಮೂಲಕ 990 ವಾಹನಗಳನ್ನು ವಶಪಡಿಸಲಾಗಿದ್ದು, 4,56,900 ರೂ. ದಂಡರೂಪದಲ್ಲಿ ಸಂಗ್ರಹಿಸಲಾಗಿದೆ.
ಹೆಲ್ಮೆಟ್ ಧರಿಸದೇ ಸಂಚಾರ ನಡೆಸುತ್ತಿದ್ದ ದ್ವಿಚಕ್ರ ವಾಹನಗಳು, ಸೀಟ್ ಬೆಲ್ಟ್ ಧಾರಣೆ ನಡೆಸದೇ ಸಂಚರಿಸುತ್ತಿದ್ದ ನಾಲ್ಕು ಚಕ್ರ ವಾಹನಗಳು, ಪರವಾನಗಿ ಇಲ್ಲದೆ ಸಂಚಾರ ನಡೆಸುತ್ತಿದ್ದ ವಾಹನಗಳು, ಲೈಟ್ಗಳು ಸಮರ್ಪಕವಾಗಿಲ್ಲದ, ಅತಿ ಭಾರ ಹೇರಿಕೊಂಡು ತೆರಳುತ್ತಿರುವ, ಮೂವರು ಸಂಚಾರ ನಡೆಸುವ ದ್ವಿಚಕ್ರ ವಾಹನಗಳು ಇತ್ಯಾದಿ ಆರೋಪಗಳ ಮೇರೆಗೆ ವಾಹನಗಳನ್ನು ವಶಪಡಿಸಲಾಗಿದ್ದು, ದಂಡ ಹೇರಲಾಗಿದೆ. ಚಂದ್ರಗಿರಿ ನದಿ ತೀರ ಮತ್ತು ಕುಂಬಳೆ ಸೇತುವೆ ಬಳಿ ಪ್ರಧಾನವಾಗಿ ಈ ಸೂಕ್ಷ್ಮತಪಾಸಣೆ ನಡೆಸಲಾಗುತ್ತಿದೆ.
ಪ್ರಥಮ ದಿನ ತಪಾಸಣೆ ಮೂಲಕ ಕಾನೂನು ಉಲ್ಲಂಘಿಸಿದ ಆರೋಪದಲ್ಲಿ 210 ವಾಹನಗಳ ಮೂಲಕ 59 ಸಾವಿರ ರೂ. ದಂಡಸಂಗ್ರಹಿಸಲಾಗಿದೆ. ಎರಡನೇ ದಿನ 145 ವಾಹನಗಳ ಮೂಲಕ 28 ಸಾವಿರ ರೂ. ದಂಡ ಪಡೆಯಲಾಗಿದೆ. ಮೂರನೇ ದಿನ 203 ವಾಹನಗಳ ಮೂಲಕ 70,200 ರೂ.ದಂಡ ಸಂಗ್ರಹಿಸಲಾಗಿದೆ. ನಾಲ್ಕನೇ ದಿನ 222 ವಾಹನಗಳ ಮೂಲಕ 57,600 ರೂ. ದಂಡ ಹೇರಲಾಗಿದೆ. 5ನೇ ದಿನ 210 ವಾಹನಗಳನ್ನು ಈ ನಿಟ್ಟಿನಲ್ಲಿ ಪತ್ತೆಮಾಡಲಾಗಿದ್ದು, 80.100 ರೂ.ದಂಡ ವಸೂಲಿ ಮಾಡಲಾಗಿದೆ.
ಕಾಸರಗೋಡು ಆರ್.ಡಿ.ಒ. ಅಬ್ದುಲ್ ಸಮದ್, ರಸ್ತೆ ಸಂಚಾರ ಅಧಿಕಾರಿ ಅಬ್ದುಲ್ ಶುಕೂರ್ ಕುಡಕ್ಕಲ್, ಎಂ.ಪಿ.ಎ.ಗಳಾದ ಚಾರ್ಲಿ ಆಂಟನಿ, ಶಂಕರ ಪಿಳ್ಳೆ, ದಿನೇಶ್ ಕುಮಾರ್.ಎ.ಎಂ.ವಿ.ಗಳಾದ ರಾಜೇಶ್ ಕೋರತ್, ಟಿ.ವೈಕುಂಠನ್, ಕೋಡೋತ್ ದಿನೇಶನ್, ಬೇಬಿ ಲಾಜಿ, ರಂಜಿತ್, ಸುರೇಶ್, ಸಂಚಾಪಿ ಎಸ್ ಐ ಶಶಿಕುಮಾರ್, ಕುಂಬಳೆ ಎಸ್ ಐ ಅಶೋಕನ್ ಮೊದಲಾದವರು ನೇತೃತ್ವ ವಹಿಸಿದ್ದಾರೆ.




