ನಾಳೆ ಕಣ್ಣೂರು ವಿಮಾನ ನಿಲ್ದಾಣ ಲೋಕಾರ್ಪಣೆ
0
ಡಿಸೆಂಬರ್ 08, 2018
ಕಾಸರಗೋಡು: ಕಣ್ಣೂರು ಜಿಲ್ಲೆಯ ಮಟ್ಟನ್ನೂರು ನಗರಸಭಾ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಘಾಟನೆ ಇಂದು ನಡೆಯಲಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿಮಾನ ನಿಲ್ದಾಣವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ನಾಗರಿಕ ವಿಮಾನಯಾನ ಸಚಿವಾಲಯದ ನಿರ್ದೇಶಕರು ಕಣ್ಣೂರಿನ ಹಸಿರು ನಿಲ್ದಾಣದ ವಿಮಾನಯಾನಕ್ಕೆ ಇತ್ತೀಚಿಗೆ ಪರವಾನಗಿ ನೀಡಿದ್ದರು. ಕಣ್ಣೂರು ಇಂಟರ್‍ನ್ಯಾಶನಲ್ ಏರ್‍ಪೋರ್ಟ್ ಲಿಮಿಟೆಡ್(ಕಿಯಾಲ್) ಮೂಲಕ ಸಾಕಾರ ಕಂಡ ವಿಮಾನ ನಿಲ್ದಾಣ ನಿರ್ಮಾಣವು ಖಾಸಗಿ ಮತ್ತು ಸರಕಾರಿ ಸಹಭಾಗಿತ್ವದ ಮೂಲಕ ಪೂರ್ಣಗೊಂಡಿದೆ. ಮಟ್ಟನ್ನೂರು ನಗರಸಭಾ ವ್ಯಾಪ್ತಿಯ 2,300 ಎಕರೆ ಪ್ರದೇಶದಲ್ಲಿ ವಿಮಾನ ನಿಲ್ದಾಣ ಸಿದ್ಧವಾಗಿದೆ. ವಿಮಾನ ನಿಲ್ದಾಣವು 2,050 ಮೀ. ಉದ್ದದ ರನ್ ವೇ ಹೊಂದಿದ್ದು ಅದನ್ನು 4 ಸಾವಿರ ಮೀ. ನವರೆಗೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ವಿಮಾನ ನಿಲ್ದಾಣದಿಂದ ಬೋಯಿಂಗ್-777 ನಂತಹ ದೊಡ್ಡ ವಿಮಾನಗಳು ಹಾರಾಟ ನಡೆಸಬಹುದಾಗಿದೆ ಎಂದು ಅಧಿಕೃತರು ತಿಳಿಸಿದ್ದಾರೆ.
ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ನಗರದಿಂದ 20 ಕಿ.ಮೀ ದೂರದಲ್ಲಿರುವ ಕಣ್ಣೂರು-ಮಟ್ಟನ್ನೂರು-ಮೈಸೂರು ರಸ್ತೆ ಸಮೀಪದಲ್ಲಿದೆ. ಕರ್ನಾಟಕದ ಕೊಡಗು ಜಿಲ್ಲೆಗೆ ಹತ್ತಿರವಾಗಿರುವ ವಿಮಾನನಿಲ್ದಾಣದಿಂದ ಕೊಡಗು ಮತ್ತು ಮೈಸೂರು ಜಿಲ್ಲೆಗಳ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ಸಿಗಲಿದೆ. ಮಡಿಕೇರಿಯಿಂದ ನೂತನ ಕಣ್ಣೂರು ವಿಮಾನ ನಿಲ್ದಾಣವು 90 ಕಿ.ಮೀ ಅಂತರದಲ್ಲಿದ್ದು, ಮೈಸೂರಿನಿಂದ 158 ಕಿ.ಮೀ ದೂರದಲ್ಲಿದೆ. 11 ವಿದೇಶಿ ವಿಮಾನಗಳು, 6 ದೇಸಿ ನಾಗರಿಕ ವಿಮಾನಗಳು ಕಣ್ಣೂರಿನಿಂದ ಸೇವೆ ಆರಂಭಿಸಲಿವೆ. ಪ್ರಥಮ ಹಂತದಲ್ಲಿ ವಿಮಾನ ನಿಲ್ದಾಣದ ಕಾಮಗಾರಿಗೆ 1,892 ಕೋಟಿ ರೂ. ನಿರ್ಮಾಣ ವೆಚ್ಚವಾಗಿದೆ. ಕಿಯಾಲ್ ಮೂಲಕ 2014 ಫೆ.ಯಲ್ಲಿ ವಿಮಾನ ನಿಲ್ದಾಣದ ನಿರ್ಮಾಣ ಕಾಮಗಾರಿ ಆರಂಭಗೊಂಡಿತ್ತು. ತಿರುವನಂತಪುರ, ಕೊಚ್ಚಿ, ಕಲ್ಲಿಕೋಟೆಯ ನಂತರ ರಾಜ್ಯದ ನಾಲ್ಕನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಗರಿ ಕಣ್ಣೂರಿಗಿದೆ.





