ಅಂಬೇಡ್ಕರ್ ಪರಿನಿರ್ವಾಣ ದಿನಕ್ಕೆ ಸಾರ್ವತ್ರಿಕ ರಜೆ ನೀಡಬೇಕು
0
ಡಿಸೆಂಬರ್ 06, 2018
ಬದಿಯಡ್ಕ: ಡಾ| ಬಿ.ಆರ್. ಅಂಬೇಡ್ಕರ್‍ರವರ ಪರಿನಿರ್ವಾಣ ದಿನಕ್ಕೆ ಸಾರ್ವತ್ರಿಕ ರಜೆಯನ್ನು ನೀಡಿ ಸಂವಿಧಾನ ಶಿಲ್ಪಿಗೆ ಗೌರವ ತೋರಬೇಕು ಎಂದು ಆಗ್ರಹಿಸಲಾಯಿತು.
ಗುರುವಾರ ಬದಿಯಡ್ಕ ಸಮೀಪದ ಬಾರಡ್ಕದಲ್ಲಿ ಅಂಬೇಡ್ಕರ್ ವಿಚಾರ ವೇದಿಕೆ ಆಯೋಜಿಸಿದ ಅಂಬೇಡ್ಕರ್ ಪರಿನಿರ್ವಾಣ ದಿನದ ಕಾರ್ಯಕ್ರಮದಲ್ಲಿ ಆಗ್ರಹ ವ್ಯಕ್ತಪಡಿಸಲಾಯಿತು. ಈ ಬಗ್ಗೆ ಅಂಚೆ ಕಾರ್ಡು ಚಳವಳಿಯನ್ನು ನಡೆಸುವುದಾಗಿ ಸಭೆಯಲ್ಲಿ ಸ್ಪಷ್ಟಪಡಿಸಲಾಯಿತು. ಜ್ಞಾನದ ಸಂಕೇತ ವಿಶ್ವಕೋಶ ಡಾ| ಅಂಬೇಡ್ಕರರಿಗೆ ಭಾರತದಲ್ಲಿ ಸಾಕಷ್ಟು ಗೌರವ ಸಿಗದಿದ್ದರೂ ಇತರ ದೇಶಗಳು ಅವರನ್ನು ಅಂಗೀಕರಿಸಿದೆ. ಅವರ ವ್ಯಕ್ತಿತ್ವವನ್ನು ಜಾತಿಯ ದೃಷ್ಟಿಕೋನದಿಂದ ವೀಕ್ಷಿಸಿರುವುದೇ ಈ ಪ್ರಮಾದಕ್ಕೆ ಕಾರಣವೆಂದು ಹೇಳಲಾಯಿತು.
ಅಂಬೇಡ್ಕರ್ ವಿಚಾರ ವೇದಿಕೆಯ ಗೌರವಾಧ್ಯಕ್ಷ ಚಂದ್ರಶೇಖರ ಬಿ. ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಲಕ್ಷ್ಮಣ ಪೊನರಂ ಅಂಬೇಡ್ಕರರ ಭಾವಚಿತ್ರಕ್ಕೆ ಹಾರಾರ್ಪಣೆಗೈದರು. ಕೆ.ಪಿ.ಕೃಷ್ಣನ್ ಕುಟ್ಟಿ ಅಂಬೇಡ್ಕರ್ ಮತ್ತು ಸಮಕಾಲೀನ ದಲಿತರು ಎಂಬ ವಿಚಾರದ ಬಗ್ಗೆ ಮಾತನಾಡಿದರು. ವಿವಿಧ ಸಮುದಾಯ ಸಂಘಟನೆಯ ನೇತಾರರಾದ ಉದಯಕುಮಾರ್ ಸಿ.ಎಚ್., ಬಾಬು ಪಚ್ಲಂಪಾರೆ, ಶೇಖ್ ಎ., ಅರುಣ್ ಕುಮಾರ್ ಎ.ಕೆ., ಚಂದ್ರಶೇಖರ ಕುಂಬಳೆ, ವಸಂತ ಅಜಕ್ಕೋಡು, ಶಾಂತ ಬಾರಡ್ಕ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು. ಸುರೇಶ ಅಜಕ್ಕೋಡು, ಶಂಕರ ಸ್ವಾಮಿಕೃಪಾ, ಲೀಲಾ ಪಟ್ಟಾಜೆ ಉಪಸ್ಥಿತರಿದ್ದರು. ನಾರಾಯಣ ಬಾರಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಂಬೇಡ್ಕರ್ ವಿಚಾರ ವೇದಿಕೆಯ ಅಧ್ಯಕ್ಷ ರಾಮ ಪಟ್ಟಾಜೆ ಸ್ವಾಗತಿಸಿ, ಸದಸ್ಯೆ ಸುರೇಖ ಬಾರಡ್ಕ ವಂದಿಸಿದರು. ಸುಂದರ ಬಾರಡ್ಕ ಕಾರ್ಯಕ್ರಮ ನಿರೂಪಿಸಿದರು.





