ಐಲ ಮೈದಾನದ ವಿವಾದ ರಾಜಕೀಯ ಲಾಭಕ್ಕೆ-ಲೀಗ್
0
ಮಾರ್ಚ್ 12, 2019
ಕುಂಬಳೆ: ಇತಿಹಾಸ ಪ್ರಸಿದ್ದ ಉಪ್ಪಳ ಸಮೀಪದ ಐಲ ಮೈದಾನದ ಬಗ್ಗೆ ವೃಥಾ ವಿವಾದ ಸೃಷ್ಟಿಸಿ ಪಕ್ಷ ಹಾಗೂ ಮುಖಂಡರನ್ನು ಅವಮಾನಿಸಲು ಕೆಲವು ರಾಜಕೀಯ ಸಂಘಟನೆಗಳು ತೆರೆಮರೆಯಲ್ಲಿ ಯತ್ನಿಸುತ್ತಿರುವುದಾಗಿ ಮುಸ್ಲಿಂಲೀಗ್ ನೇತಾರರು ಕುಂಬಳೆಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ದಶಕಗಳ ಹಿಂದೆ 40 ಎಕ್ರೆಗಳಿಗಿಂತಲೂ ಹೆಚ್ಚು ವಿಸ್ತಾರವಿದ್ದ ಐಲ ಮೈದಾನ ಪ್ರಸ್ತುತ 18 ಎಕ್ರೆಗಳಷ್ಟು ವಿಸ್ತಾರವಿದೆ. ಈ ಪೈಕಿ 11 ಎಕ್ರೆಗಳಷ್ಟು ಸ್ಥಳವನ್ನು ವಿವಿಧ ಸರಕಾರಿ ಸಂಸ್ಥೆಗಳಿಗೆ ಮೀಸಲಿಡಲಾಗಿದೆ. ಮಿಕ್ಕುಳಿದ ಏಳು ಎಕ್ರೆ ಸ್ಥಳವನ್ನು ಗ್ರಾ.ಪಂ. ಉಪಯೋಗಕ್ಕೆ ಬಳಸಲು ಗ್ರಾ.ಪಂ. ಆಡಳಿತ ಸಮಿತಿ ಸಭೆ ತೀರ್ಮಾನಿಸಿ ಸರಕಾರಕ್ಕೆ ವರದಿ ನೀಡಲಾಗಿದೆ.
ಈ ಹಿಂದೆ 1992ರಲ್ಲಿ ಅಂದಿನ ಎಜೆಐ ಶಿಕ್ಷಣ ಸಂಸ್ಥೆ ಹಾಗೂ ಐಲ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಸಮಿತಿಗಳು ತಮಗೆ ಒಂದೊಂದು ಎಕ್ರೆ ಸ್ಥಳ ಒದಗಿಸಬೇಕೆಂದು ಆಗ್ರಹಸಿ ಗ್ರಾ.ಪಂ.ಗೆ ಮನವಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಅಂದಿನ ಗ್ರಾ.ಪಂ. ಆಡಳಿತ ಸಮಿತಿ ಈ ಬೇಡಿಕೆಗೆ ಅಂಗೀಕಾರವನ್ನೂ ನೀಡಿತ್ತು. ಆದರೆ ರಾಜಕೀಯ ಪಕ್ಷವೊಂದು ಇದೀಗ ಗೊಂದಲ ಸೃಷ್ಟಿಸಲು ಯತ್ನಿಸುತ್ತಿದ್ದು, ಇದು ಕಾನೂನು ಬಾಹಿರ ಮತ್ತು ಕುತ್ಸಿತ ರಾಜಕೀಯ ಮನೋಸ್ಥಿತಿಯಾಗಿದೆ ಎಂದು ಸಂಬಂಧಪಟ್ಟವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪ್ರಸ್ತುತ ರಾಜಕೀಯ ಪಕ್ಷವೊಂದರ ಮುಖಂಡರೂ, ಮಾಜೀ ಶಾಸಕರೊಬ್ಬರು ಐಲ ಮೈದಾನದ ಹೆಸರಲ್ಲಿ ವೃಥಾ ಗೊಂದಲ ಸೃಷ್ಟಿಸಲು ಯತ್ನಿಸುತ್ತಿದ್ದು, ಮುಸ್ಲಿಂಲೀಗ್ ಆಡಳಿತದ ಮಂಗಲ್ಪಾಡಿ ಗ್ರಾ.ಪಂ. ನಲ್ಲಿ ಜನರ ಮಧ್ಯೆ ಸಂಘರ್ಷಕ್ಕೆ ಯತ್ನಿಸುತ್ತಿದ್ದಾರೆ. ಮಂಗಲ್ಪಾಡಿ ಗ್ರಾ.ಪ. ಆಡಳಿತ ಸಮಿತಿಯು 2018ರ ಜೂ. 28 ರಂದು ನಡೆಸಿದ ಆಡಳಿತ ಸಮಿತಿ ಸಭೆಯ ತೀರ್ಮಾನವನ್ನು ಮಾಜೀ ಶಾಸಕರ ನೇತೃತ್ವದಲ್ಲಿ ತಿರುಚಲು ಯತ್ನಿಸಿ, ಭಾಗವಹಿಸಿದ ಸದಸ್ಯರ ಸಹಿ ಸಹಿತ ದಾಖಲಾತಿ ವರದಿಯನ್ನು ತಿದ್ದಲು ಯತ್ನಿಸಿರುವುದು ಬೆಳಕಿಗೆ ಬಂದಿದ್ದು, ಈ ಬಗ್ಗೆ ಮುಸ್ಲಿಂಲೀಗ್ ಕಠಿಣ ಕಾನೂನು ಕ್ರಮಗಳ ಮೂಲಕ ನ್ಯಾಯಕ್ಕಾಗಿ ಹೋರಾಡಲಿದೆ ಎಂದು ಸಂಬಂಧಪಟ್ಟವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಸ್ಲಿಂಲೀಗ್ ಮಂಡಲ ಅಧ್ಯಕ್ಷ ಟಿ.ಎ.ಮೂಸಾ, ಉಪಾಧ್ಯಕ್ಷ ಅಬ್ಬಾಸ್ ವಾನಂದೆ, ಮಂಗಲ್ಪಾಡಿ ಪಂಚಾಯತಿ ಮುಸ್ಲಿಂಲೀಗ್ ಅಧ್ಯಕ್ಷ ಎಂ.ಬಿ.ಯೂಸುಫ್ ಹಾಜಿ, ಕಾರ್ಯದರ್ಶಿ ಉಮರ್ ಅಪೋಲೋ, ಯುವಲೀಗ್ ಮಂಡಲ ಪ್ರಧಾನ ಕಾರ್ಯದರ್ಶಿ ಗೋಲ್ಡನ್ ಅಬ್ದುಲ್ ರಹಮಾನ್, ಮುಸ್ಲಿಂಲೀಗ್ ಉಪ್ಪಳ ನಗರ ಸಮಿತಿ ಪ್ರಧಾನ ಕಾರ್ಯದರ್ಶಿ ಬಿ.ಎಂ.ಮುಸ್ತಫ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.




