ಮಂಜೇಶ್ವರ: ಮೊದಲ ಬಾರಿಗೆ ಕೇರಳ ಕರ್ನಾಟಕದ ಗಡಿ ಪ್ರದೇಶವಾದ ತಲಪಾಡಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಉದ್ಯಾವರದ ಎ ಎಚ್ ಎಸ್ ಗೆಳೆಯರ ತಂಡದ ಪ್ರಾಯೋಜಕತ್ವದಲ್ಲಿ ವಸ್ತುಗಳ ಪ್ರದರ್ಶನ, ಮನರಂಜನೆ ಹಾಗೂ ಮಾರಾಟ ಹಬ್ಬಗಳ ಒಂದು ತಿಂಗಳ ಬೋರ್ಡರ್ ಎಕ್ಸ್‍ಪೋ 2019 ಕ್ಕೆ ಬುಧವಾರ ಚಾಲನೆ ನೀಡಲಾಯಿತು.
ಸಣ್ಣ ದರದಲ್ಲಿ ಪ್ರವೇಶಾತಿಯನ್ನು ಹೊಂದಿರುವ ಬೋರ್ಡರ್ ಎಕ್ಸ್‍ಪೋ 2019 ವಿವಿಧ ರೀತಿಯ ವಿನ್ಯಾಸಗಳನ್ನು ಹೊಂದಿದ್ದು, ಮಕ್ಕಳಿಗೆ ಹಾಗೂ ಹಿರಿಯರಿಗೆ ಮನರಂಜನೆಯನ್ನು ನೀಡುತ್ತಿದೆ. ಈ ಪ್ರದರ್ಶನದಲ್ಲಿ ಈವರೆಗೆ ನೋಡಿರದ ಮತ್ತು ಕೇಳಿರದ ಹೊಸ ಹೊಸ ಮನರಂಜನೆಗಳನ್ನು ಕಾಣಬಹುದಾಗಿದೆ . ಬೋರ್ಡರ್ ಎಕ್ಸ್‍ಪೋಗೆ ಅಮೋಘ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನರ ಅಗತ್ಯತೆಯನ್ನು ಮನಗಂಡು ಉತ್ತಮ ಗುಣಮಟ್ಟದ ಉತ್ಪನ್ನಗಳು ಹಾಗೂ ಸೇವೆ ಗ್ರಾಹಕರಿಗೆ ಲಭ್ಯವಾಗಬೇಕೆಂಬ ನಿಟ್ಟಿನಲ್ಲಿ ಮೇಳ ಆಯೋಜಿಸಲಾಗಿರುವುದಾಗಿ ಆಯೋಜಕರು ತಿಳಿಸಿದ್ದಾರೆ .
ಬೋರ್ಡರ್ ಎಕ್ಸ್‍ಪೋ 2019 ಕ್ಕೆ ಮಂಜೇಶ್ವರ ಬ್ಲಾಕ್ ಪಂಚಾಯತು ಅಧ್ಯಕ್ಷ ಎ.ಕೆ.ಎಂ.ಅಶ್ರಫ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಉತ್ಸಾಹಿ ತರುಣರ ಮುತುವರ್ಜಿಯಿಂದ ಇಂದು ಗಡಿನಾಡು ಪ್ರದೇಶ ಕಂಗೊಳಿಸವಂತಾಗಿದೆ. ಸಣ್ಣ ದರದಲ್ಲಿ ಪ್ರವೇಶಾತಿಯನ್ನು ನೀಡಿ ಊರವರಿಗೆ ಮನರಂಜನೆಯನ್ನು ಸಮರ್ಪಿಸಿರುವ ಇದರ ಆಯೋಜಕರಾದ ತರುಣರ ಸೇವೆ ನಿಜಕ್ಕೂ ಶ್ಲಾಘನೀಯ. ಇಂತಹ ಎಕ್ಸ್‍ಪೋಗಳನ್ನು ನಾವು ಪ್ರೋತ್ಸಾಹಿಸಬೇಕಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ವಿವಿಧ ರಾಜಕೀಯ, ಸಾಮಾಜಿಕ ಸಂಸ್ಥೆಗಳ ಮುಖಂಡರಾದ ಬಿ.ವಿ.ರಾಜನ್, ಇಕ್ಬಾಲ್ ಹೊಸಂಗಡಿ, ಬ್ಲಾಕ್ ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಮುಸ್ತಫಾ ಉದ್ಯಾವರ, ಅಬ್ದುಲ್ಲಾ ಗುಡ್ಡಕೇರಿ, ಹಮೀದ್ ಹೊಸಂಗಡಿ, ಮುಸ್ತಫಾ ಕಡಂಬಾರ್, ಹನೀಫ್ ಪಿ.ಎ, ದಯಾಕಾರ ಮಾಡ, ಬೋರ್ಡರ್ ಎಕ್ಸ್‍ಪೋ ಅಲಿಕುಟ್ಟಿ, ಅಫಿಜ್, ಹನೀಫ್, ಶಾನವಾಜ್, ಹಕೀಮ್,ಸಲೀಮ್ ಮೊದಲಾದವರು ಉಪಸ್ಥಿತರಿದ್ದರು.

