ಮುಳ್ಳೇರಿಯ : ಕಾಸರಗೋಡು ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಭಾದ ಅಂಗಸಂಸ್ಥೆಯಾದ ಮುಳ್ಳೇರಿಯ ವಲಯ ಶಿವಳ್ಳಿ ಬ್ರಾಹ್ಮಣ ಸಭಾದ ಆಶ್ರಯದಲ್ಲಿ ಜಿಲ್ಲೆಯ ಯುವ ಸಾಹಿತಿ, ಪತ್ರಕರ್ತ ವಿರಾಜ್ ಅಡೂರು ಅವರ 9ನೇ ಕೃತಿಯಾದ 'ಗಾದೆ ಗಮ್ಮತ್ತು- ಭಾಗ 4' ಅಂಕಣ ಬರಹದ ಕೃತಿಯು ಅ.20ರಂದು ಅಪರಾಹ್ನ 2 ಕ್ಕೆ ಅಡೂರಿನ ವಿದ್ಯಾಭಾರತೀ ವಿದ್ಯಾಲಯದಲ್ಲಿ ಬಿಡುಗಡೆಯಾಗಲಿದೆ. ಈ ಕೃತಿಯ ಮೊದಲ ಮೂರು ಭಾಗಗಳು ಬೆಂಗಳೂರಿನ ತೇಜು ಪ್ರಕಾಶನದ ಮೂಲಕ ಈಗಾಗಲೇ ಪ್ರಕಟಗೊಂಡಿವೆ. ಬೆಂಗಳೂರಿನ ರಾಮನಾಥ್ ಹಾಗೂ ವಿ ಪದ್ಮಾವತಿ ಅವರ ತೇಜು ಪಬ್ಲಿಕೇಶನ್ ಸಂಸ್ಥೆಯು ಈ ಕೃತಿಯನ್ನು ಪ್ರಕಟಿಸಿದ್ದು, ಡಾ. ಕೆ ಎನ್ ಅಡಿಗ ಅಡೂರು ಮುನ್ನುಡಿ ಹಾಗೂ ಶಿಕ್ಷಣ ತಜ್ಞ ವಿ ಬಿ ಕುಳಮರ್ವ ಹಿನ್ನುಡಿ ಬರೆದಿದ್ದಾರೆ. ಜನಪದ ಕ್ಷೇತ್ರದಲ್ಲಿ ಪ್ರಸ್ತುತವಾದ, ಶೈಕ್ಷಣಿಕ ಕ್ಷೇತ್ರಕ್ಕೆ ಅಗತ್ಯವಾದ ಅರ್ಥವತ್ತಾದ ಸುಮಾರು 52 ಗಾದೆಗಳನ್ನು ಪ್ರಸ್ತುತ ಸಮಾಜಕ್ಕೆ ಹೊಂದಿಸಿಕೊಂಡು ಈ ಕೃತಿಯಲ್ಲಿ ವಿಶ್ಲೇಷಣಾತ್ಮಕವಾಗಿ ವಿವರಿಸಲಾಗಿದೆ.
ವಿರಾಜ್ ಅಡೂರು ಅವರ 'ಗಾದೆ ಗಮ್ಮತ್ತು-ಭಾಗ 4' ಕೃತಿಯನ್ನು ನಿವೃತ್ತ ಶಿಕ್ಷಕ ಪಣಿಯೆ ಸೀತಾರಾಮ ಕುಂಜತ್ತಾಯ ಬಿಡುಗಡೆ ಮಾಡುವರು. ಕುಂಟಾರು ಶಾಲೆಯ ಶಿಕ್ಷಕಿ ಸುಮಂಗಲಾ ಎಸ್ ಎನ್ ತಂತ್ರಿ ಕೃತಿ ಪರಿಚಯ ಮಾಡುವರು. ಕಾರ್ಯಕ್ರಮದಲ್ಲಿ ಮುಳ್ಳೇರಿಯ ವಲಯ ಶಿವಳ್ಳಿ ಬ್ರಾಹ್ಮಣ ಸಭಾದ ಅಧ್ಯಕ್ಷ ನೂಜಿಬೆಟ್ಟು ವೆಂಕಟಕೃಷ್ಣ ಕಾರಂತ, ಶಿವಳ್ಳಿ ಬ್ರಾಹ್ಮಣ ಸಭಾದ ಜಿಲ್ಲಾ ಸಮಿತಿ ಜೊತೆ ಕಾರ್ಯದರ್ಶಿ ಶ್ರೀಪ್ರಕಾಶ್ ಎ ಭಾಗವಹಿಸುವರು.


