ಕಾಸರಗೋಡು: ಕೇರಳ ಲೋಕಸೇವಾ ಆಯೋಗ (ಪಿಎಸ್‍ಸಿ) ಅ.22ರಂದು ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಕನ್ನಡ ಉದ್ಯೋಗಾರ್ಥಿಗಳ ಆಯ್ಕೆಗಾಗಿ ನಡೆಸಿ ಕನ್ನಡ ಮತ್ತು ಮಲಯಾಳ ಬಲ್ಲ ಎಲ್‍ಡಿ ಕ್ಲರ್ಕ್ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಮಲಯಾಳ ಪ್ರಶ್ನೆಯನ್ನೇ ಹೆಚ್ಚಾಗಿ ನೀಡಿದ್ದು, ಇದರಿಂದ ಕನ್ನಡ ಉದ್ಯೋಗಾರ್ಥಿಗಳು ವಂಚಿತರಾಗುವುದರಿಂದ ಪರೀಕ್ಷೆಯನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ ಕನ್ನಡ ಮತ್ತು ಮಲೆಯಾಳ ಬಲ್ಲ ಎಲ್‍ಡಿ ಕ್ಲರ್ಕ್ ಪರೀಕ್ಷೆ ಬರೆದ ಉದ್ಯೋಗಾರ್ಥಿಗಳು ಇಂದು ಕಾಸರಗೋಡು ಪಿಎಸ್‍ಸಿ(ಕೇರಳ ಲೋಕಸೇವಾ ಆಯೋಗ) ಕಚೇರಿ ಮುಂಭಾಗದಲ್ಲಿ ಬೆಳಿಗ್ಗೆ 10 ರಿಂದ ಧರಣಿ ಸತ್ಯಾಗ್ರಹ ನಡೆಯಲಿದೆ.
ಪಿಎಸ್‍ಸಿ ವಿಜ್ಞಾಪನೆ ಪ್ರಕಾರ ಪರೀಕ್ಷೆ ನಡೆಸದೇ ಕನ್ನಡ ಉದ್ಯೋಗಾರ್ಥಿಗಳಿಗೆ ಉಂಟಾದ ಅನ್ಯಾಯದ ಬಗ್ಗೆ ಈಗಾಗಲೇ ಅಧಿಕೃತರಿಗೆ ಮನವಿ ಸಲ್ಲಿಸಲಾಗಿದೆ. ಅಲ್ಲದೇ ಪಿಎಸ್‍ಸಿ ಅಧ್ಯಕ್ಷರನ್ನು ತಿರುವನಂತಪುರದಲ್ಲಿ ಭೇಟಿಯಾಗಿ ಅನ್ಯಾಯದ ಬಗ್ಗೆ ಮನವರಿಕೆ ಮಾಡಲಾಗುವುದು.

