ಉಪ್ಪಳ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಕ್ರಮಮತದಾನ ತಡೆಯುವಲ್ಲಿ ಮತಗಟ್ಟೆ ಏಜೆಂಟರು ಪ್ರಬಲ ಮಾರ್ಗಗಳಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಭಿಪ್ರಾಯಪಟ್ಟರು.
ಮಂಗಲ್ಪಾಡಿ ಗ್ರಾಮಪಂಚಾಯತಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಮತಗಟ್ಟೆ ಏಜೆಂಟರ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮತಗಟ್ಟೆ ಏಜೆಂಟರ ಹೊಣೆಗಾರಿಕೆಗಳನ್ನು ವಿವರಿಸಿದ ಅವರು ಮತಗಟ್ಟೆಗೆ ಸಂಬಂಧಿಸಿದ ಎಲ್ಲ ಮತದಾರರನ್ನು ಗುರುತಿಸಲು ಮತಗಟ್ಟೆ ಏಜೆಂಟರಿಂದ ಸಾಧ್ಯ ಎಂದರು. ಯಾವ ಅಭ್ಯರ್ಥಿಯ ಏಜೆಂಟ್ ಆಗಿದ್ದರೂ, ಅವರ ವಿರುದ್ಧ ಯಾರಾದರೂ ಮತಗಟ್ಟೆಯಲ್ಲಿ ಬೆದರಿಕೆ ಹಾಕುವ ಇತ್ಯಾದಿ ನಡೆಸಿದರೆ ಆರೋಪಿಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುವರು ಎಂದು ತಿಳಿಸಿದರು.
ರಾಜ್ಯದಲ್ಲೇ ಪ್ರಥಮ ಬಾರಿಗೆ ಚುನಾವಣೆಯೊಂದಕ್ಕೆ ಸಂಬಂಧಿಸಿ ಎಲ್ಲ ಮತಗಟ್ಟೆ ಏಜೆಂಟರಿಗೆ ಈ ರೀತಿ ತರಬೇತಿ ನೀಡಲಾಗಿದೆ. ಮತದಾನ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಈ ತರಬೇತಿ ಒದಗಿಸಲಾಗಿದೆ.
ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸಂಬಂಧ 8 ಕೇಂದ್ರಗಳಲ್ಲಿ ಶುಕ್ರವಾರ ತರಬೇತಿ ನೀಡಲಾಯಿತು. ಉಪಚುನಾವಣೆಯ ಪೂರ್ವಭಾವಿಯಾಗಿ, ಚುನಾವಣೆ ಪ್ರಕ್ರಿಯೆಗಳಿಗೆ ಸಂಬಂಧಿಸಿದ ಮೋಕ್ ಪೋಲ್(ಪ್ರಹಸನ ಮತದಾನ), ಟೆಸ್ಟ್ ಪೋಲ್(ಪರೀಕ್ಷಾರ್ಥ ಮತದಾನ)ಸಹಿತ ವಿವಿಧ ವಿಚಾರಗಳಲ್ಲಿ ತರಬೇತಿ ನಡೆಯಿತು. ಮತಗಟ್ಟೆ ಏಜೆಂಟರಿಗೆ ಸೂಕ್ತ ತರಬೇತಿ ನೀಡಿಕೆ ಮೂಲಕ ಸುಧಾರಿತ, ನೀತಿಯುತ ಮತದಾನ ಸಾಧ್ಯ ಎಂಬ ಚುನಾಣೆ ಆಯೋಗದ ಗುರಿಯ ಹಿನ್ನೆಲೆಯಲ್ಲಿ ಈ ತರಬೇತಿ ನೀಡಲಾಗಿದೆ.

