ಪತ್ತನಂತಿಟ್ಟು: ಶಬರಿಮಲೆ ಪವಿತ್ರ ತೀರ್ಥಯಾತ್ರೆ ನವೆಂಬರ್ ತಿಂಗಳಲ್ಲಿ ಆರಂಭಗೊಳ್ಳಳಿರುವ ನಡುವೆ, ಶಬರಿಮಲೆ ದೇವಸ್ಥಾನಕ್ಕೆ ಉಗ್ರರು ಹಾಗೂ ಸಮಾಜದ್ರೋಹಿಗಳ ಬೆದರಿಕೆಯಿರುವ ಬಗ್ಗೆ ಗುಪ್ತಚರ ವಿಭಾಗ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದೆ.
ಈ ನಿಟ್ಟಿನಲ್ಲಿ ರಾಜ್ಯ ಪೊಲೀಸ್ ಇಲಾಖೆ ಶಬರಿಮಲೆ ಹಾಗೂ ಆಸುಪಾಸಿನ ಪ್ರದೇಶಗಳಲ್ಲಿ ಗರಿಷ್ಠ ಭದ್ರತೆ ಒದಗಿಸಲು ತೀರ್ಮಾನಿಸಿದೆ. ಇದಕ್ಕಾಗಿ ಶಬರಿಮಲೆ ಪ್ರದೇಶವನ್ನು ಹತ್ತು ವಲಯಗಳನ್ನಾಗಿ ವಿಂಗಡಿಸಲಾಗಿದೆ. ಇಲವುಂಗಾಲ್, ನೀಲಕ್ಕಲ್ ಬೈಪಾಸ್ ಕ್ಯಾಂಪ್, ಪಂಪಾ, ಚೆರಿಯಾನವೆಟ್ಟ, ವಲಿಯಾನವೆಟ್ಟ, ಶಬರಿಮಲೆ ಸನ್ನಿದಾನ, ಪಾಂಡಿತಾವಳಂ, ಪುಲ್‍ಮೇಡ್, ಉಪ್ಪುಪಾರ ಹಾಗೂ ಸತ್ರಂ ಎಂಬ ಭದ್ರತಾವಲಯಗಳನ್ನಾಗಿ ವಿಭಜಿಸಲಾಗಿದೆ. ಈ ಪ್ರದೇಶದ ಪ್ರತಿ ಕಿಲೋಮೀಟರ್ ಅಂತರದಲ್ಲಿ ಭದ್ರತೆ ಒದಗಿಸಲಾಗುವುದು. ದೇವಸ್ಥಾನ ಮತ್ತು ಭಕ್ತಾದಿಗಳ ಸುರಕ್ಷತೆ ಖಾತ್ರಿಪಡಿಸಲು ಮೊದಲ ಆದ್ಯತೆ ಕಲ್ಪಿಸಲಾಗುವುದು. ಉಗ್ರಗಾಮಿ ಮತ್ತು ಸಮಾಜದ್ರೋಹಿಗಳ ಬೆದರಿಕೆ ಹಿನ್ನೆಲೆಯಲ್ಲಿ, ಪೊಲೀಸ್ ಕಾಯ್ದೆ 83ರ ಪ್ರಕಾರ ವಿಶೇಷ ಭದ್ರತೆ ಒದಗಿಸಲಾಗುವುದು.
ಈ ಕಾಯ್ದೆ ಪ್ರಕಾರ ಭದ್ರತಾವಲಯದ ವ್ಯಾಪ್ತಿಯಲ್ಲಿ ಮ್ಯಾಜಿಸ್ಟ್ರೇಟ್‍ರ ಅನುಮತಿಯಿಲ್ಲದೆಯೂ, ಯಾವುದೇಕ್ರಮ ಕೈಗೊಲ್ಳಲು ಪೊಲೀಸರು ಸವತಂತ್ರರಾಗಿರುತ್ತಾರೆ. ಭದ್ರತೆಗೆ ಅಗತ್ಯವೆನಿಸಿದಲ್ಲಿ, ಕೇಂದ್ರ ಪಡೆಯ ನೆರವು ಸಹಾಯ ಪಡೆಯಲು ರಾಜ್ಯಪೊಲೀಸ್ ಇಲಾಖೆ ತೀರ್ಮಾನಿಸಿದೆ. ಶಬರಿಮಲೆ ಯಾತ್ರೆ ಋತು ನವೆಂಬರ್‍ನಲ್ಲಿ ಆರಂಭಗೊಳ್ಳಲಿದ್ದು, 2020 ಜನವರಿಯಲ್ಲಿ ಮಕರಸಂಕ್ರಮಣದ ವರೆಗೂ ಮುಂದುವರಿಯಲಿದೆ. ಈ ಮಧ್ಯೆ ಶಬರಿಮಲೆಗೆ ಯುವತಿಯರ ಪ್ರವೇಶ ವಿಚಾರದಲ್ಲಿ ಸುಪ್ರೀಂಕೋರ್ಟಿಗೆ ಸಲ್ಲಿಕೆಯಾಗಿರುವ ಮರು ಪರಿಶೀಲನಾ ಅರ್ಜಿಯ ಮೇಲಿನ ತೀರ್ಪು ಪ್ರಕಟಗೊಳ್ಳಲಿದ್ದು, ತೀರ್ಪು ಪ್ರತಿಕೂಲವಾಗಿದ್ದಲ್ಲಿ, ಈ ಹಿಂದಿನಂತೆ ಶಬರಿಮಲೆಯಲ್ಲಿ ಪ್ರತಿಭಟನೆ ತಲೆದೋರುವ ಸಾಧ್ಯತೆಯೂ ಹೆಚ್ಚಾಗಿದೆ.


