ಮುಳ್ಳೇರಿಯ: ಸಾಹಿತ್ಯ ಕ್ಷೇತ್ರದಲ್ಲಿ ಸದಾ ಜೀವಂತವಾಗಿರುವ ಗಾದೆಗಳು ಆಡು ಭಾಷೆಯಿಂದಲೇ ಹುಟ್ಟಿಕೊಂಡ ಜನಪದೀಯ ವೇದಗಳು. ಅವುಗಳ ಆಂತರ್ಯದಲ್ಲಿ ನೀತಿ, ವಿವೇಕ, ದೂರಾಲೋಚನೆಯಂತಹಾ ಸೂಕ್ಷ್ಮ ಸಂವೇದನೆಗಳಿವೆ. ಗಾದೆಗಳ ಮಹತ್ವದ ಬೋಧನೆಗಳು ಸಾರ್ವಕಾಲಿಕವಾಗಿ ಸಮಾಜಮುಖಿ ಎಂದು ನಿವೃತ್ತ ಶಿಕ್ಷಕ ಪಣಿಯೆ ಸೀತಾರಾಮ ಕುಂಜತ್ತಾಯ ಹೇಳಿದರು.
ಅವರು ಅಡೂರಿನ ವಿದ್ಯಾಭಾರತಿ ವಿದ್ಯಾಲಯದಲ್ಲಿ ಮುಳ್ಳೇರಿಯ ವಲಯ ಶಿವಳ್ಳಿ ಬ್ರಾಹ್ಮಣ ಸಭಾದ ಆಶ್ರಯದಲ್ಲಿ ನಡೆದ ದಸರಾ-ದೀಪಾವಳಿ ಉತ್ಸವದ ಸಮಾರೋಪ ಸಮಾರಂಭದಲ್ಲಿ ಸಾಹಿತಿ ವಿರಾಜ್ ಅಡೂರು ಅವರ ಗಾದೆ ಗಮ್ಮತ್ತು -ಭಾಗ 4 ಅಂಕಣ ಬರಹಗಳ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದರು.
ದೀಪಾವಳಿ ಹಾಗೂ ನವರಾತ್ರಿಯನ್ನು ತುಳುವರು ಅಗತ್ಯವಾಗಿ ಆಚರಿಸಬೇಕು. ಈ ಹಬ್ಬಗಳ ಔಚಿತ್ಯ ಹಾಗೂ ಸಂಸ್ಕøತಿಯನ್ನು ಮುಂದಿನ ತಲೆಮಾರಿಗೆ ದಾಟಿಸಲು ಮಕ್ಕಳನ್ನು ಬಳಸಿಕೊಂಡು ಹಬ್ಬಾಚರಣೆ ಅಗತ್ಯ. ಈ ನಿಟ್ಟಿನಲ್ಲಿ ಮುಳ್ಳೇರಿಯ ಶಿವಳ್ಳಿ ಬ್ರಾಹ್ಮಣ ಸಭಾವು ಅರ್ಥಪೂರ್ಣ ಹೆಜ್ಜೆ ಇಟ್ಟಿದೆ. ಇದು ಎಲ್ಲರಿಗೂ ಆದರ್ಶವಾಗಬೇಕು ಎಂದು ಅವರು ಹೇಳಿದರು.
ಮುಳ್ಳೇರಿಯ ವಲಯ ಶಿವಳ್ಳಿ ಬ್ರಾಹ್ಮಣ ಸಭಾದ ಅಧ್ಯಕ್ಷ ನೂಜಿಬೆಟ್ಟು ವೆಂಕಟಕೃಷ್ಣ ಕಾರಂತ ಅಧ್ಯಕ್ಷತೆ ವಹಿಸಿದ್ದರು. ಗಾದೆ ಗಮ್ಮತ್ತು ಕೃತಿಯನ್ನು ಪರಿಚಯಿಸಿದ ಕುಂಟಾರು ಶಾಲಾ ಶಿಕ್ಷಕಿ ಸುಮಂಗಲಾ ಎಸ್.ಎನ್.ತಂತ್ರಿ ಮಾತನಾಡಿ ಗಾದೆಗಳು ಪ್ರಸ್ತುತ ಶೈಕ್ಷಣಿಕ ಕ್ಷೇತ್ರದಲ್ಲಿ ಅತ್ಯಗತ್ಯ. ಪರೀಕ್ಷೆಗಳಲ್ಲೂ ಕೂಡಾ ಗಾದೆಗಳ ವಿವರಣೆಯನ್ನು ವಿದ್ಯಾರ್ಥಿಗಳು ಮಾಡಬೇಕಾಗುತ್ತದೆ. ಅಂತಹಾ ಸಂದರ್ಭದಲ್ಲಿ ಸರಳ ಶಬ್ದಗಳಿಂದ ಕೂಡಿದ ಅರ್ಥವತ್ತಾದ ಈ ಕೃತಿಯು ಉತ್ತಮ ಮಾರ್ಗದರ್ಶನವಾಗುತ್ತದೆ. ಈ ಕೃತಿಯಲ್ಲಿ ಗಾದೆಗಳ ಒಳ ಸುಳುಹು, ನಿರೂಪಣೆಗಳು ಸಮರ್ಥವಾಗಿವೆ. ಗಾದೆ ಗಮ್ಮತ್ತು ಕೃತಿಯು ಉತ್ತಮ ಶೈಕ್ಷಣಿಕ ಮಾರ್ಗದರ್ಶಿ ಎಂದು ಹೇಳಿದರು. ಬೆಂಗಳೂರಿನ ಕೆ.ಎನ್.ಅಡಿಗ ಅಡೂರು ಶುಭ ಹಾರೈಸಿದರು.
ಸಭೆಯಲ್ಲಿ ಶಿವಳ್ಳಿ ಬ್ರಾಹ್ಮಣ ಸಭಾದ ಜಿಲ್ಲಾ ಅಧ್ಯಕ್ಷೆ ಸತ್ಯಪ್ರೇಮಾ ಎಂ.ಭಾರಿತ್ತಾಯ, ವಲಯ ಕೋಶಾಧಿಕಾರಿ ಶ್ರೀಪ್ರಸಾದ ಭಾರಿತ್ತಾಯ, ರಾಜಾರಾಮ ಸರಳಾಯ, ರವಿರಾಜ್ ಕೇಕುಣ್ಣಾಯ, ಶ್ರೀಪತಿ ಎಂ, ಸ್ನೇಹಾ ಕೇಕುಣ್ಣಾಯ, ಸಮೃದ್ಧ ಸರಳಾಯ, ಪ್ರೀತಿ ಅನಿಲ್ ಕುಮಾರ್, ಗುರುಚರಣ್, ಸತ್ಯನಾರಾಯಣ ಮನೊಳಿತ್ತಾಯ, ಪದ್ಮ ಆರ್, ಶೋಭಾ, ಸಜಿತಾ, ಆಶಾ ಎ, ಚಂಚಲಾ ಎಸ್. ಮೊದಲಾದವರು ಉಪಸ್ಥಿತರಿದ್ದರು. ರಾಜಿತಾ ಹಾಗೂ ಪ್ರತಿಮಾ ಪ್ರಾರ್ಥಿಸಿದರು. ಪದ್ಮಾ ಟೀಚರ್ ಸ್ವಾಗತಿಸಿದರು. ಶ್ರೀಪತಿ ಎಂ. ವಂದಿಸಿದರು. ವಲಯ ಕಾರ್ಯದರ್ಶಿ ಪ್ರಶಾಂತ ರಾಜ ವಿ.ತಂತ್ರಿ ನಿರೂಪಿಸಿದರು.
ಈ ಸಂದರ್ಭದಲ್ಲಿ ದೀಪಾವಳಿ ಉತ್ಸವದಲ್ಲಿ ನಡೆದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಮಕ್ಕಳನ್ನು ನೆನಪಿನ ಕಾಣಿಗೆ ನೀಡಿ ಅಭಿನಂದಿಸಲಾಯಿತು. ಪುರಾಣ ರಸಪ್ರಶ್ನೆಯ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮುಳ್ಳೇರಿಯ ವಲಯ ಶಿವಳ್ಳಿ ಬ್ರಾಹ್ಮಣ ಸಭಾದ ಬೆಳ್ಳೂರು, ಕಾರಡ್ಕ ಹಾಗೂ ದೇಲಂಪಾಡಿ ಗ್ರಾಮ ಪಂಚಾಯತಿ ಅನೇಕ ಮಂದಿ ಸದಸ್ಯರು ಭಾಗವಹಿಸಿದ್ದರು.


