ಮಂಜೇಶ್ವರ: ಮಂಜೇಶ್ವರ ವಿಧಾನಸಭೆ ಕ್ಷೇತ್ರ ಉಪಚುನಾವಣೆಗೆ ಸಿದ್ಧವಾಗಿದೆ. ಈ ಹಿಂದೆ ಶಾಸಕರಾಗಿದ್ದ ಪಿ.ಬಿ.ಅಬ್ದುಲ್ ರಝಾಕ್ ಅವರ ನಿಧನದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಚುನಾವಣೆ ನಡೆಸಬೇಕಾಗಿ ಬಂದಿರುವ ಹಿನ್ನೆಲೆಯಲ್ಲಿ ಈ ರಂಗ ಮತ್ತೊಮ್ಮೆ ಸಿದ್ಧವಾಗಿದೆ.
ಅ.21ರಂದು ಇಲ್ಲಿ ಮತದಾನ ಜರುಗಲಿದೆ. 24ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಕನ್ನಡ, ತುಳು, ಕೊಂಕಣಿ, ಮರಾಟಿ, ಬ್ಯಾರಿ, ಹಿಂದೂಸ್ತಾನಿ, ಕೊಡವ ಸಹಿತ ಅನೇಕ ಭಾಷೆಗಳನ್ನಾಡುವ ಜನತೆ ಇಲ್ಲಿ ವಾಸಿಸುತ್ತಿದ್ದಾರೆ. ಯಕ್ಷಗಾನ ಸಹಿತ ಸನಾತನೀಯ ಕಲೆಗಳು ಇಲ್ಲಿ ಸೌಹಾರ್ದತೆಯ ಸಂಕೇತಗಳಾಗಿವೆ. ಉದ್ಯಾವರ ಮಾಡ ಕ್ಷೇತ್ರ, ಮಂಜೇಶ್ವರ ಜೈನ ಬಸದಿ, ಕಣ್ವತೀರ್ಥ ಸಹಿತ ಆರಾಧನಾಲಯಗಳು ಇಲ್ಲಿನ ಪ್ರಧಾನ ಕೇಂದ್ರಗಳಾಗಿವೆ.
ಎಣ್ಮಕಜೆ, ಕುಂಬಳೆ, ಮಂಗಲ್ಪಾಡಿ, ಮಂಜೇಶ್ವರ, ಮೀಂಜ, ಪೈವಳಿಕೆ, ಪುತ್ತಿಗೆ, ವರ್ಕಾಡಿ ಗ್ರಾಮಪಂಚಾಯತ್ ಗಳು ಸೇರಿರುವ ರಾಜ್ಯದ ಉತ್ತರದ ಗಡಿಯ ವಿಧಾಸಭೆ ಕ್ಷೇತ್ರ ಮಂಜೇಶ್ವರವಾಗಿದೆ. 1956 ನ.1ರಂದು ರಾಜ್ಯ ರಚನೆಗೊಳ್ಳುವ ಮೂಲಕ ಇದು ಕೇರಳಕ್ಕೆ ಸೇರಿಹೋಗಿದೆ. ಅಲ್ಲಿ ವರೆಗೆ ಮದರಾಸು ಸರಕಾರ ವ್ಯಾಪ್ತಿಯಲ್ಲಿ ದಕ್ಷಿಣ ಕನ್ನಡದ ಭಾಗವಾಗಿತ್ತು.
ಈ ಕ್ಷೇತ್ರದಲ್ಲಿ ಒಟ್ಟು 214779 ಮತದಾರರಿದ್ದಾರೆ. ಇವರಲ್ಲಿ 106928 ಮಹಿಳೆಯರು, 107851 ಮಂದಿ ಪುರುಷರು, 1240 ವಿಶೇಷಚೇತನರು ಇದ್ದಾರೆ. ಒಟ್ಟು 98 ಮತಗಟ್ಟೆಗಳಿವೆ. ಚುನಾವಣೆಯ ವೇಳೆ 20 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ನಡೆಯಲಿದೆ. 49 ಮತಗಟ್ಟೆಗಳಲ್ಲಿ ಸಶಸ್ತ್ರ ಪೊಲೀಸ್ ದಳದ ಭದ್ರತೆ ಇರುವುದು. 11ರಲ್ಲಿ ವೀಡೀಯೋ ಚಿತ್ರೀಕರಣ ನಡೆಯಲಿದೆ. 53ರಲ್ಲಿ ಮೈಕ್ರೋ ನಿರೀಕ್ಷಕರು ಕರ್ತವ್ಯದಲ್ಲಿರುವರು. ಬುರ್ಖಾ ಧಾರಿಗಳ ಗುರುತಿಗೆ 198 ಮಹಿಳಾ ಪೋಲಿಂಗ್ ಸಹಾಯಕರು ಇರುವರು.
ರಾಜಕೀಯ ವಲಯದಲ್ಲೂ ಪ್ರತ್ಯೇಕತೆ:
ಮಂಜೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ ಪ್ರಜಾಪ್ರಭುತ್ವ ದ ಅತಿ ದೊಡ್ಡ ಉತ್ಸವವವಾಗಿರುವ ಚುನಾವಣೆ ನಡೆದು ಜನತೆಯ ತೀರ್ಪು ಲಭಿಸಲು ಇನ್ನು 5 ದಿನಗಳು ಮಾತ್ರ ಬಾಕಿಯಿದೆ. ಅನೇಕ ಭೌತಿಕ ವೈವಿಧ್ಯಗಳಂತೆ ಈ ಕ್ಷೇತ್ರ ರಾಜಕೀಯ ವಲಯದಲ್ಲೂ ಅನೇಕ ಪ್ರತ್ಯೇಕೆತೆಗೆ ಕಾರಣವಾಗಿರುವುದೂ ಕುತೂಹಲಕ್ಕೆ ಕಾರಣವಾಗಿದೆ. ಪ್ರಬಲ ರಾಜಕೀಯ ಪಕ್ಷಗಳ ಅಭ್ಯರ್ಥಿಗಳನ್ನು ಗೆಲ್ಲಿಸಿರುವ ಈ ಕ್ಷೇತ್ರ ಹಲವು ಬಾರಿ ಸ್ವತಂತ್ರ ಅಭ್ಯರ್ಥಿಗಳನ್ನೂ ಗೆಲ್ಲಿಸಿದ ಇತಿಹಾಸ ಹೊಂದಿರುವುದು ಗಮನಾರ್ಹ. ಕನ್ನಡಿಗರ ಪ್ರತಿನಿಧಿಗಳಾದ ಅಭ್ಯರ್ಥಿಗಳು ಬಹುಮತದಿಂದ ಗೆಲವು ಸಾಧಿಸಿದ ದಾಲೆಗಳೂ ಇಲ್ಲಿವೆ.
957ರ ಚುನಾವಣೆಯಲ್ಲಿ ಕನ್ನಡಿಗರ ಪ್ರತಿನಿಧಿ ಎಂ.ಉಮೇಶ್ ರಾವ್ ಅವಿರೋಧವಾಗಿ ಗೆಲವು ಸಾಧಿಸುವ ಮೂಲಕ ಇಲ್ಲಿನ ಇತಿಹಾಸಕ್ಕೆ ಹೊಸನಾಂದಿಯನ್ನು ಹಾಡಿದ್ದರು. 1960ರಲ್ಲಿ ಕನ್ನಡಿಗರ ಹಿರಿಯ ನಾಯಕ, ಮಹಾಚೇತನ ಕಳ್ಳಿಗೆ ಮಹಾಬಲ ಭಂಡಾರಿ ಅವರು ಗೆದ್ದು ಶಾಸಕರಾದರು. 1965ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮತ್ತೆ ರಂಗಕ್ಕಿಳಿದಿದ್ದ ಕಳ್ಳಿಗೆ ಮಹಾಬಲ ಭಂಡಾರಿ ಅವರು ಗೆಲವಿನ ಪುನರಾವರ್ತನೆಗೆ ಕಾರಣರಾದರು. 1967ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ರಾಜಕೀಯ ರಂಗದಲ್ಲಿ ಸ್ಪರ್ಧಿಸಿ ಮಗದೊಮ್ಮೆ ವಿಜಯ ಪತಾಕೆ ಹಾರಿಸಿದರು. 1970 ಮತ್ತು 1977ರಲ್ಲಿ ಸಿ.ಪಿ.ಐಯ ಅಭ್ಯರ್ಥಿ ಎಂ.ರಾಮಪ್ಪ ಗೆದ್ದರು. 1980 ಮತ್ತು 1982ರಲ್ಲಿ ಸಿ.ಪಿ.ಐಯ ಡಾ.ಎ.ಸುಬ್ಬರಾವ್ ಗೆಲವು ಕಂಡು ಶಾಸಕರಾದರು. 1987, 1991, 1996, 2001ರಲ್ಲಿ ಮುಸ್ಲಿಂಲೀಗಿನ ಚೆರ್ಕಳಂ ಅಬ್ದುಲ್ಲ ಅವರು ವಿಜಯ ಸರಣಿಯನ್ನು ಕಂಡರು. 2006ರಲ್ಲಿ ಸಿ.ಪಿ.ಎಂ.ನ ಸಿ.ಎಚ್.ಕುಂಞÂ ಂಬು ಅವರು ಗೆದ್ದರು. 2011 ಮತ್ತು 2016ರಲ್ಲಿ ಮುಸ್ಲಿಂಲೀಗಿನ ಪಿ.ಬಿ.ಅಬ್ದುಲ್ ರಝಾಕ್ ಅವರು ಗೆಲವು ಕಂಡರು.


