ಮುಳ್ಳೇರಿಯ: ಗ್ರಾಮೀಣ ಪ್ರದೇಶದ ಕೃಷಿಕರು ಒಂದರ ಮೇಲೊಂದರಂತೆ ಆಗಾಗ ಸಂಕಷ್ಟ ಅನುಭವಿಸಬೇಕಾಗಿ ಬರುತ್ತಿದ್ದು ಇದೀಗ ಮಿತಿ ಮೀರಿದ ಮಂಗಗಳ ಉಪಟಳದಿಂದ ಕಂಗೆಟ್ಟು ಕುಳಿತು ಕೊಳ್ಳಬೇಕಾದ ಪರಿಸ್ಥಿತಿ ಬಂದೊದಗಿದೆ. ಒಂದೆಡೆ ಹವಮಾನದ ವೈಪರೀತ್ಯಗಳು ಕೃಷಿ ಕಾಯಕದ ಮೇಲೆ ದುಷ್ಪರಿಣಾಮವನ್ನು ಬೀರುತ್ತಿರುವ ನಡುವೆ ಇನ್ನೊಂದೆಡೆ ಮಂಗಗಳು ದಾಳಿ ಮಾಡಿ ಕೃಷಿ ಹಾನಿ ಮಾಡುತ್ತಿರುವುದು ಗಡಿ ಗ್ರಾಮ ಬೆಳ್ಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಿತ್ಯ ವರದಿಯಾಗುತ್ತಿದೆ.
ಬೆಳ್ಳೂರು, ನಾಟೆಕಲ್ಲು, ಕಳ್ವಾಜೆ ಮೊದಲಾದೆಡೆ ಇಲ್ಲಿನ ತೆಂಗಿನ ಮರಕ್ಕೆ ಹತ್ತಿ ಸೀಯಾಳ ಸಮೇತ ತೆಂಗಿನ ಕಾಯಿಗಳನ್ನು ತಿಂದು ತೇಗುವ ಮಂಗಗಳು ಕೃಷಿ ತೋಟದಲ್ಲಿರುವ ಅಡಿಕೆ, ಹಿಂಗಾರ, ಬಾಳೆ, ಕೊಕ್ಕೊ ತರಕಾರಿ ಮೊದಲಾದವುಗಳನ್ನು ನಾಶಪಡಿಸುತ್ತಿದೆ.
ಇದರಿಂದಾಗಿ ಕೃಷಿಕರಿಗೆ ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬಂತಾಗಿದೆ. ಕೆಲವು ಮನೆ ಪರಿಸರದಲ್ಲೂ ಮಂಗಗಳು ಉಪಟಳ ನೀಡುತ್ತಿದ್ದು ಮಕ್ಕಳು, ಮಹಿಳೆಯರು ಭಯ ಭೀತರಾಗಿದ್ದಾರೆ.
ದಿನಂಪ್ರತಿ ಮುಂಜಾನೆ 5 ಗಂಟೆಯಿಂದ ಈ ಪರಿಸರದ ಕಾಡಿನಿಂದ ಕೃಷಿ ತೋಟದೊಳಗೆ ಲಗ್ಗೆ ಇಡುವ ಮಂಗಗಳು ಇಲ್ಲಿನ ಮನೆಯವರಿಗೊಂದು ತಲೆ ನೋವಾಗಿ ಕಾಡುತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆ ಸಂಬಂಧಿತ ಕೃಷಿ ಇಲಾಖೆಯವರ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಮಂಗಗಳ ಉಪಟಳ ಮೀತಿ ಮೀರಿದ ಕಾರಣ ಕೆಲವರು ದೇವರಿಗೆ ಹರಕೆ ಹೊತ್ತಿರುವ ಬಗ್ಗೆಯೂ ತಿಳಿದುಬಂದಿದೆ. ಮಂಗಳನ್ನು ಓಡಿಸಲು ಕೆಲವರು ಏರ್ ಗನ್ ಉಪಯೋಗಿಸಲಾರಂಭಿಸಿದರೂ ಅದಕ್ಕೂ ಹೆದರದ ಮಂಗಗಳು ಹಿಂಡು ಹಿಂಡಾಗಿ ತೋಟಗಳಿಗೆ ಲಗ್ಗೆ ಇಡುವುದನ್ನು ಪರಿಪಾಠ ವಾಗಿಸಿದೆ. ಬೆಳ್ಳೂರು ಪರಿಸರದಲ್ಲಿರುವ ಕಲ್ಲಿನ ಕೋರೆಗಳಿಂದ ಸಿಡಿಯುವ ತೋಟೆಗಳ ಶಬ್ದಕ್ಕೂ ಬೆದರದೆ ದಾಳಿ ಇಡುವ ಮಂಗಗಳನ್ನು ನಿಯಂತ್ರಿಸುವುದು ಹೇಗೆ ಎಂಬುದೇ ಕೃಷಿಕರಿಗೆ ಬಿಡಿಸಲಾಗದ ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ.
ಅಭಿಮತ:
* ಕಳೆದ ಮೂರು ವರ್ಷಗಳಿಂದ ಮೀತಿ ಮೀರಿದ ಮಂಗಗಳ ಉಪಟಳ. ನನ್ನ ಎರಡೂವರೆ ಎಕ್ರೆ ಕೃಷಿ ತೋಟದಲ್ಲಿ ಮನೆ ಖರ್ಚು ಕಳೆದು ಮಾರಲಿಕ್ಕೆ ಸಿಗುತ್ತಿದ್ದ ತೆಂಗಿನಕಾಯಿ ಕಳೆದೆರಡು ವರ್ಷದ ಮಂಗನ ಉಪಟಳದಿಂದಾಗಿ ಇದೀಗ ಇಮ್ಮಡಿ ಹಣ ಕೊಟ್ಟು ಕೊಂಡುಕೊಳ್ಳಬೇಕಾದ ಪರಿಸ್ಥಿತಿ ಬಂದೊದಗಿದೆ. ಕೃಷಿ ಬೆಳೆಗಳನ್ನು ಸಂರಕ್ಷಿಸುವುದು ಸವಾಲಾಗುತ್ತಿದ್ದು, ಸಂಬಂಧಪಟ್ಟವರು ತುರ್ತು ಕ್ರಮ ಕೈಗೊಳ್ಳಬೇಕು.
ದಯಾನಂದ ರೈ ಕಳ್ವಾಜೆ
ನಷ್ಟಕ್ಕೊಳಗಾದ ಪ್ರಗತಿಪರ ಕೃಷಿಕರು.
....................................................................................................
ಅಭಿಮತ 2)
ಮಂಗಗಳ ಉಪಟಳದ ಬಗ್ಗೆ ಈಗಾಗಲೇ ದೂರುಗಳು ಲಭಿಸಿವೆ. ಈ ಹಿನ್ನೆಲೆಯಲ್ಲಿ ವನ್ಯಜೀವಿ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಅವರ ಅನುಮತಿ ಲಭ್ಯವಾದರೆ ತಜ್ಞರ ತಂಡದ ಮೂಲಕ ಬೋನು ಬಳಸಿ ಮಂಗಗಳನ್ನು ಸೆರೆಹಿಡಿಯಲಾಗುವುದು. ಬಳಿಕ ದಟ್ಟಾರಣ್ಯದೊಳಗೆ ಅವುಗಳನ್ನು ಬಿಡುಗಡೆಗೊಳಿಸಲಾಗುವುದು. ತಮ್ಮ ಇಲಾಖೆಯಿಂದ ನೀಡಲಾದ ಮನವಿಯ ಬಗ್ಗೆ ವನ್ಯಜೀವಿ ಇಲಾಖೆಯ ಅನುಮತಿ ಕ್ರಮದ ಬಗ್ಗೆ ಮುಂದಿನ ಎರಡು ದಿನಗಳಲ್ಲಿ ಸಕಾರಾತ್ಮಕ ಉತ್ತರ ನಿರೀಕ್ಷಿಸಲಾಗಿದೆ. ಕೃಷಿಕರು ಗಾಬರಿಗೊಳ್ಳುವ ಅಗತ್ಯ ಇಲ್ಲ. ಓಡಿಸುವ ತರಾತುರಿಯಲ್ಲಿ ಜೀವಹಾನಿಗಳು ಸಂಭವಿಸದಂತೆ ಜಾಗರೂಕತೆ ಪಾಲಿಸಬೇಕು.
ಅನೂಪ್.ಎಸ್.
ಕಾಸರಗೋಡು ಜಿಲ್ಲಾ ಅರಣ್ಯಾಧಿಕಾರಿ(ಡಿ.ಎಫ್.ಓ.)
ಸಂಪರ್ಕ ಸಂಖ್ಯೆ: 9447979076



