ಕುಂಬಳೆ: ಕುಂಬಳೆ ಸೀಮೆಯ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದಾದ ಮುಜುಂಗಾವು ಶ್ರೀ ಪಾರ್ಥಸಾರಥೀಕೃಷ್ಣ ದೇವಸ್ಥಾನದ ಕೆರೆಯಲ್ಲಿ ವಾರ್ಷಿಕ ಕಾವೇರಿ ತೀರ್ಥ ಸ್ನಾನ ಗುರುವಾರ ಸಾಂಪ್ರದಾಯಿಕ ಶ್ರದ್ದಾ ಭಕ್ತಿಯಿಂದ ನಡೆಯಿತು. 45 ಸಹಸ್ರಕ್ಕೂ ಮಿಕ್ಕಿ ಭಕ್ತಾದಿಗಳು ತೀರ್ಥಸ್ನಾನದಲ್ಲಿ ಪಾಲ್ಗೊಂಡು ಪುನೀತರಾದರು.
ದೇವಸ್ಥಾನದ ಕೆರೆಯಲ್ಲಿ ಕಾವೇರಿ ಸಂಕ್ರಮಣದಂದು ಮಿಂದರೆ ಚರ್ಮರೋಗಗಳೆಲ್ಲವೂ ವಾಸಿಯಾಗುತ್ತದೆ ಎಂಬ ನಂಬಿಕೆ ಪ್ರಾಚೀನ ಪರಂಪರೆಯಲ್ಲಿ ನಡೆದುಕೊಂಡುಬರುತ್ತಿದೆ. ಮುಜುಂಗಾವು ತೀರ್ಥದ ಕೆರೆ ಹಾಗೂ ಮಡಿಕೇರಿ ಭಾಗಮಂಡಲದ ಕಾವೇರಿ ಉದ್ಭವ ಸ್ಥಾನದ ಕೆರೆಗೂ ನೇರ ಸಂಪರ್ಕವಿರುವ ಬಗ್ಗೆಯೂ ಐತಿಹ್ಯ ಕೇಳಿ ಬರುತ್ತಿದೆ. ಬೆಳಿಗ್ಗೆ 4ಗಂಟೆಗೆ ಆರಂಭಗೊಂಡ ತೀರ್ಥ ಸ್ನಾನ ಮಧ್ಯಾಹ್ನ ಮಹಾಪೂಜೆಯ ವರೆಗೂ ನಡೆದುಬಂತು. ಕೆಲವೊಂದು ಚರ್ಮರೋಗಗಳಲ್ಲಿ ಬಳಲುತ್ತಿರುವವರು ತೀರ್ಥ ಸ್ನಾನದಲ್ಲಿ ಪಾಲ್ಗೊಂಡು ಮುಕ್ತಿ ಹೊಂದಿದವರಿದ್ದಾರೆ. ವರ್ಷಪೂರ್ತಿ ಇಲ್ಲಿನ ಕೆರೆಯಲ್ಲಿ ನೀರು ತುಂಬಿಕೊಂಡಿರುವುದು ಇನ್ನೊಂದು ವಿಶೇಷ.
ಗುರುವಾರ ಬೆಳಿಗ್ಗೆ 4ಕ್ಕೆ ದೇವಸ್ಥಾನದ ಅರ್ಚಕರು ದೇವಸ್ಥಾನದ ಕೆರೆಯಿಂದ ಬೆಳ್ಳಿಕೊಡಪಾನದಲ್ಲಿ ತೀರ್ಥವನ್ನು ವಾದ್ಯಘೋಷಗಳೊಂದಿಗೆ ತಂದು ಶ್ರೀ ದೇವರಿಗೆ ಅಭಿಷೇಕ ಮಾಡಿದ ನಂತರ ತೀರ್ಥ ಸ್ನಾನ ಆರಂಭಗೊಂಡಿತು. ಬೆಳಿಗ್ಗೆ ಮಿಂದು ಶುಚಿರ್ಭೂತರಾಗಿ ಆಗಮಿಸಿದ ಭಕ್ತಾದಿಗಳು ದೇವಸ್ಥಾನದ ಕೆರೆಯಲ್ಲಿ ಮುಳುಗೇಳುವ ಮೂಲಕ ತೀರ್ಥಸ್ನಾನ ಕೈಗೊಂಡರು. ಬಳಿಕ ಬೆಳ್ತಿಗೆ ಅಕ್ಕಿ, ಹುರಳಿ ಸಹಿತ ಧಾನ್ಯಗಳ ಮಿಶ್ರಣವನ್ನು ಕೆರೆಯ ಸುತ್ತಲೂ ಪ್ರದಕ್ಷಿಣೆಯಲ್ಲಿ ಚೆಲ್ಲುತ್ತ ಬಂದು ಉಳಿದ ಧಾನ್ಯಗಳನ್ನು ದೇವಸ್ಥಾನದ ಎದುರಿನ ಪಾತ್ರೆಯಲ್ಲಿ ಸುರಿದು ಶ್ರೀ ದೇವರ ದರ್ಶನ ಪಡೆಯುವುದರೊಂದಿಗೆ ಹರಕೆ ಸಲ್ಲಿಕೆಯಾಗುತ್ತದೆ ಎಂಬ ಪ್ರತೀತಿ. ತೀರ್ಥ ಸ್ನಾನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಬೆಳಿಗ್ಗೆ 10ರಿಂದಲೇ ಭೋಜನ ಪ್ರಸಾದ ವಿತರಣೆ ಆರಂಭಗೊಂಡಿತು. ಪೆರ್ಲ, ಮುಳ್ಳೇರಿಯಾ ಭಾಗದಿಂದ ಕುಂಬಳೆಗೆ ತೆರಳುವ ಹಾಗೂ ವಾಪಸಾಗುವ ಎಲ್ಲ ಬಸ್‍ಗಳು ನಾಯ್ಕಾಪು ಹಾಗೂ ಸೂರಂಬೈಲು ಮುಖ್ಯರಸ್ತೆಯಿಂದ ಒಂದು ಕಿ.ಮೀ ದೂರದಲ್ಲಿರುವ ದೇವಸ್ಥಾನದ ಮೂಲಕವೇ ಹಾದು ಹೋಗಿ ಭಜಕರಿಗೆ ಅನುಕೂಲ ಮಾಡಿಕೊಟ್ಟವು.
ಪುರಾಣಗಳ ಪ್ರಕಾರ ಈ ಕೆರೆಯನ್ನು ಪಾಂಡವರು ಒಂದೇ ರಾತ್ರಿಯಲ್ಲಿ ನಿರ್ಮಿಸಿದರೆಂದು, ತುಲಾ ಸಂಕ್ರಮಣದ ದಿನದಂದು ಈ ಪವಿತ್ರ ಕೆರೆಯಲ್ಲಿ ತೀರ್ಥ ಸ್ನಾನಗೈದರೆ ಸಕಲ ಚರ್ಮ ವ್ಯಾಧಿಗಳು ನಿವಾರಣೆಯಾಗುತ್ತದೆ ಎಂಬುದು ಅನಾಧಿ ಕಾಲದಿಂದಲೂ ಬಂದ ನಂಬಿಕೆ ಮತ್ತು ಸತ್ಯವು ಹೌದು.ಆದುದರಿಂದಲೇ ಹಿಂದೂ - ಮುಸ್ಲಿಂ - ಕ್ರೈಸ್ತರೆಂಬ ಭೇದಭಾವವಿಲ್ಲದೆ ಕೇರಳ, ಕರ್ನಾಟಕ, ತಮಿಳುನಾಡು ಇತ್ಯಾದಿ ರಾಜ್ಯಗಳ ಭಕ್ತಾದಿಗಳ ಪ್ರವಾಹವೇ ಶ್ರೀಕ್ಷೇತ್ರ ಮುಜಂಗಾವಿನ ಕಾವೇರಿ ತೀರ್ಥ ಸ್ನಾನಕ್ಕೆ ಹರಿದು ಬರುತ್ತಿರುದಕ್ಕೆ ಸಾಕ್ಷಿಯಾಗಿದೆ.

