ಕಾಸರಗೋಡು: ಬುಧವಾರ ಬೆಳಗಿನ ಜಾವ ರಾಷ್ಟ್ರೀಯ ಹೆದ್ದಾರಿಯ ಅಡ್ಕತ್ತಬೈಲಿನಲ್ಲಿ ಗ್ಯಾಸ್ ಟ್ಯಾಂಕರ್ ಮಗುಚಿ ಬಿದ್ದು ಅಡುಗೆ ಅನಿಲ ಸೋರಿಕೆಯಾದ ಪ್ರಕರಣದಲ್ಲಿ ಜಿಲ್ಲಾಡಳಿತೆ ಮತ್ತು ಸಾರ್ವಜನಿಕರು ನಡೆಸಿದ ಸಂದರ್ಭೋಚಿತ ಕಾರ್ಯಾಚರಣೆಯ ಪರಿಣಾಮ ಭಾರೀ ದುರಂತ ಕೂದಳೆಳೆ ಅಂತರದಲ್ಲಿ ತಪ್ಪಿಹೋಗಿದೆ.
ಅಗ್ನಿಶಾಮಕದಳ, ಪೊಲೀಸ್, ಆರ್.ಡಿ.ಒ, ಕಂದಾಯ ಇಲಾಖೆ ಸಿಬ್ಬಂದಿ, ಸಾರ್ವಜನಿಕರು ಕೈಜೋಡಿಸಿದ್ದರ ಪರಿಣಾಮ ಬೃಹತ್ ಅಪಾಯದಿಂದ ನಾಡು ಪಾರಾಗಿದೆ. ಮಂಗಳೂರಿನಿಂದ ಕೊಯಮತ್ತೂರಿಗೆ ತೆರಳುತ್ತಿದ್ದ ಟ್ಯಾಂಕರ್ ಲಾರಿ ಬುಧವಾರ ಬೆಳಗಿನ ಜಾವ 1.30ರ ಸುಮಾರಿಗೆ ಅಡ್ಕತ್ತಬೈಲಿನಲ್ಲಿ ಮಗುಚಿಬಿದ್ದಿತ್ತು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ಆದೇಶ ಪ್ರಕಾರ ಜಿಲ್ಲಾ ದುರಂತ ನಿವಾರಣೆ ಪ್ರಾಧಿಕಾರದ ನೇತೃತ್ವದಲ್ಲಿ ತಕ್ಷಣ ಪ್ರದೇಶಕ್ಕೆ ತಲಪಿದ ಪೊಲೀಸರು ಮತ್ತು ಅಗ್ನಿಶಾಮಕದಳ ಘಟನೆಯ ಗಾಂಭೀರ್ಯ ಗಮನಿಸಿ ಬೇಕಾದ ಮುಂಜಾಗರೂಕತೆ ಕೈಗೊಂಡಿದ್ದರು. ಈ ರಸ್ತೆ ಮೂಲಕದ ವಾಹನಸಂಚಾರ ನಿಷೇಧಿಸಲಾಗಿತ್ತು. ನಂತರ ಸಾರ್ವಜನಿಕರ ಸಹಾಯದೊಂದಿಗೆ 2 ಕಿಮೀ ಸುತ್ತಳತೆಯಲ್ಲಿ ವಾಸಿಸುತ್ತಿರುವವರನ್ನು ರಾತ್ರಿ ವೇಳೆಯೇ ಬೇರೆಡೆ ಸ್ಥಳಾಂತರಿಸಲಾಗಿತ್ತು. ದೇವಾಲಯ, ಮಸೀದಿ ಸಹಿತ ಆರಾಧನಾಲಯಗಳಿಗೆ ಘಟನೆಯ ಕುರಿತು ಬೆಳಗಿನಜಾವದಲ್ಲೇ ಮಾಹಿತಿ ರವಾನಿಸಲಾಗಿತ್ತು. ಎರಿಯಾಲ್ ಜಮಾ ಅತ್ ಮಸೀದಿ ಸಹಿತ ಕೇಂದ್ರಗಳಲ್ಲಿ ಮನೆಗಳಿಂದ ಸ್ಥಳಾಂತರಗೊಂಡವರಿಗೆ ಆಸರೆ ನೀಡಲಾಗಿತ್ತು. ಮಧ್ಯಾಹ್ನ ವೇಳೆಗೆ ಸ್ಥಿತಿ ಸಹಜವಾಗಿದ್ದು, ಮಂದಿ ತಮ್ಮ ನಿವಾಸಗಳಿಗೆ ಮರಳಿದ್ದರು. ಸಂಜೆ 4.30ರ ವೇಳೆಗೆ ಶೇ 75 ಅನಿಲವನ್ನು ಎರಡು ಬೇರೆ ಟ್ಯಾಂಕರ್ ಗಳಿಗೆ ವರ್ಗಾಯಿಸಲಾಗಿತ್ತು.
ಜಿಲ್ಲಾ ಅಗ್ನಿಶಾಮಕದಳ ಅಧಿಕಾರಿ ಬಿ.ರಾಜನ್ ಅವರ ನೇತೃತ್ವದಲ್ಲಿ ಕಾಸರಗೋಡು, ಕಾ?ಂಗಾಡ್, ಉಪ್ಪಳ ಅಗ್ನಿಶಾಮಕದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು. ಸ್ಟೇಷನ್ ಅಧಿಕಾರಿಗಳಾದ ಕೆ.ಅರುಣ್, ಪ್ರಶಾಂತ್ ಕುಮಾರ್, ಸಹಾಯಕ ಸ್ಟೇಷನ್ ಅಧಿಕಾರಿಗಳಾದ ಎಂ.ಎಸ್.ಸಂತೋಷ್ ಕುಮಾರ್, ಜಾರ್ಜ್ ಮೊದಲಾದವರು ಜೊತೆಗಿದ್ದರು.

