ಮಂಜೇಶ್ವರ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಚುನಾವಣೆಯ ವಿಜೇತರಾಗಿ ರಾಜ್ಯ ವಿಧಾನಸಭೆಯಲ್ಲಿ ಕ್ಷೇತ್ರದ ಪ್ರತಿನಿಧಿ ಯಾರಾಗಬಹುದು ಎಂಬ ಕುತೂಹಲಕ್ಕೆ ಇಂದು(ಅ.24)ತೆರೆಬೀಳಲಿದೆ. ಚುನಾವಣೆಯ ಮತ ಎಣಿಕೆ ಇಂದು ನಡೆದು, ಫಲಿತಾಂಶ ಪ್ರಕಟಗೊಳ್ಳಲಿದೆ.
ಪೈವಳಿಕೆ ನಗರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮತ ಎಣಿಕೆ ನಡೆಯಲಿದ್ದು, ಕೊನೆಯ ಹಂತದ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.
ಮತ ಎಣಿಕೆಯ ಪ್ರಕ್ರಿಯೆ 12 ಮೇಜುಗಳಲ್ಲಿ ನಡೆಯಲಿದೆ. ಜಿಲ್ಲಾಧಿಕಾರಿ ಇಡೀ ಪ್ರಕ್ರಿಯೆಯ ನಿಯಂತ್ರಣ ಹೊಂದಿರುವರು. ಮೊದಲ 5 ಮತಯಂತ್ರಗಳ ಮತಗಳನ್ನು ಎಣಿಸಲಾಗುವುದು. ಇದರೊಂದಿಗೆ ಯಂತ್ರದ ಜೊತೆಗಿರುವ ವಿವಿಪಾಟ್ ಗಳ ಸ್ಲಿಪ್ ಗಳನ್ನೂ ಗಣನೆ ಮಾಡಲಾಗುವುದು. ಚೀಟಿ ಎತ್ತುವ ಮೂಲಕ ಈ ಮತಯಂತ್ರಗಳನ್ನು ಆರಿಸಲಾಗುವುದು. ನಂತರ ಒಂದನೇ ನಂಬ್ರ ಮತಗಟ್ಟೆಯಿಂದ 198ನೇ ನಂಬ್ರ ಬೂತ್ ವರೆಗಿನ ಕ್ರಮದಲ್ಲಿ ಮತಗಣನೆ ನಡೆಯಲಿದೆ. ಮತಗಣನೆ ಕೇಂದ್ರದಲ್ಲಿ ಚುನಾವಣೆ ಅಧಿಕಾರಿ, ಉಪಚುನಾವಣೆ ಅಧಿಕಾರಿ, ಸಾರ್ವಜನಿಕ ನಿರೀಕ್ಷಕಿ, ಅಭ್ಯರ್ಥಿಗಳು ಇರುವರು.
ಪ್ರತಿ ಸುತ್ತು ಪೂರ್ತಿಗೊಂಡ ವೇಳೆ ಚುನಾವಣೆ ಅಧಿಕಾರಿ ಅವರ ಅಂಗೀಕಾರದೊಂದಿಗೆ ಡಾಟಾ ಎಂಟ್ರಿ ನಡೆಸಲಾಗುವುದು. ಸಾರ್ವಜನಿಕರು ಯಥಾ ಸಮಯ ಫಲಿತಾಂಶ ತಿಳಿಯುವ ನಿಟ್ಟಿನಲ್ಲಿ ಸೌಲಭ್ಯ ಏರ್ಪಡಿಸಲಾಗಿದೆ. 7 ಮಂದಿ ಅಭ್ಯರ್ಥಿಗಳು ಈ ಬಾರಿಯ ಮಂಜೇಶ್ವರ ವಿಧಾನಸಭೆ ಉಪಚುನಾವಣೆಯ ರಂಗದಲ್ಲಿದ್ದಾರೆ. ಎಂ.ಸಿ.ಕಮರುದ್ದೀನ್, ಕುಂಟಾರು ರವೀಶ ತಂತ್ರಿ, ಎಂ.ಶಂಕರ ರೈ ಮಾಸ್ತರ್, ಗೋವಿಂದನ್ ಬಿ. ಆಲಿನ್ ತಾಳೆ, ಕಮರುದ್ದೀನ್ ಎಂ.ಸಿ., ಜಾನ್ ಡಿಸೋಜಾ ಐ., ರಾಜೇಶ್ ಬಿ. ರಂಗದಲ್ಲಿದ್ದಾರೆ.
ಸಿದ್ಧತೆಗಳ ಸಂಬಂಧ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಸಾರ್ವಜನಿಕ ನಿರೀಕ್ಷಕಿ ಸುಷ್ಮಾ ಗೋಡ್ ಬೋಲೆ, ಕ್ಷೇತ್ರದ ಚುನಾವಣೆ ಅಧಿಕಾರಿ ಎನ್.ಪ್ರೇಮಚಂದ್ರನ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜೇಮ್ಸ್ ಜೋಸೆಫ್, ಚುನಾವಣೆ ವಿಭಾಗ ಸಹಾಯಕ ಜಿಲ್ಲಾಧಿಕಾರಿ ಪಿ.ಆರ್.ರಾಧಿಕಾ ಮೊದಲಾದವರು ಉಪಸ್ಥಿತರಿದ್ದರು.


