ಮಂಗಳೂರು: ಬಡತನ ನಿವಾರಣೆ, ಗ್ರಾಮೀಣಾಭಿವೃದ್ಧಿ ಹಾಗೂ ಸುಸ್ಥಿರ ಅಭಿವೃದ್ಧಿ ಸಾಧನೆಯನ್ನು 2030ನೇ ಇಸವಿಯೊಳಗೆ ಸಾಧಿಸುವ ನಿಟ್ಟಿನಲ್ಲಿ ಶ್ರಿಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಬಡತನ ನಿವಾರಣೆ, ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಹಲವು ಸಂಸ್ಥೆಗಳು ಸೇರಿ ಅ.30ರಿಂದ ನ.2ರವರೆಗೆ ಬೆಂಗಳೂರಿನಲ್ಲಿ ಸ್ವಸಹಾಯ ಗುಂಪು ಚಳವಳಿ ವಿಷಯದಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನ ಹಮ್ಮಿಕೊಂಡಿವೆ.
ದೇವನಹಳ್ಳಿಯ ಕ್ಲಾಕ್ರ್ಸ್ ಎಕ್ಸಾಟಿಕಾ ರಿಸಾರ್ಟ್ ಆಂಡ್ ಸ್ಪಾದಲ್ಲಿ ಸಮಾವೇಶ ನಡೆಯಲಿದ್ದು, 30ರ ಸಂಜೆ 4.30ಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಸ್ತು ಪ್ರದರ್ಶನ ಮಳಿಗೆ ಉದ್ಘಾಟಿಸಲಿದ್ದು, ಅಮೆರಿಕದ ಶಿಕಾಗೊ ನಗರದ ಪ್ರೊ.ಲ್ಯಾರಿ ರೀಡ್ ಪ್ರಧಾನ ಭಾಷಣ ಮಾಡುವರು. ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸುವರು. ನಬಾರ್ಡ್ ಅಧ್ಯಕ್ಷ ಡಾ.ಹರ್ಷಕುಮಾರ್ ಭಾನ್ವಾಲಾ ಯೋಜನೆಯ ಸಾಧನಾ ಪುಸ್ತಕ ಬಿಡುಗಡೆ ಮಾಡುವರು. 31 ಹಾಗೂ ನ.1ರಂದು ನಡೆಯುವ ಸಮ್ಮೇಳನದಲ್ಲಿ 7 ಪ್ರಮುಖ ಚರ್ಚಾಗೋಷ್ಠಿ ಹಮ್ಮಿಕೊಳ್ಳಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಮಾಜಿ ಗವರ್ನರ್ ಡಾ.ಚಕ್ರವರ್ತಿ ರಂಗರಾಜನ್, ಮಾಜಿ ಉಪ ಗವರ್ನರ್ ಡಾ.ಎಚ್.ಆರ್.ಖಾನ್, ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರಿಂದ ವಿಶೇಷ ಅಧಿವೇಶನವಿರಲಿದೆ. 1ರ ಸಂಜೆ 4.30ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ವಿಶ್ವಸಂಸ್ಥೆಯ ಬದಲಿ ಇಂಧನ ವಿಭಾಗದ ಮಾಜಿ ಮುಖ್ಯಸ್ಥ ಡಾ.ಖ್ಯಾಂಡೆ ಯಮ್ಕುಲ್ಲಾ ಪ್ರಧಾನ ಭಾಷಣ ಮಾಡಿ, ಈ ಸಂದರ್ಭ ಪ್ರಾರಂಭಿಸಲಾಗುವ ಅಂತಾರಾಷ್ಟ್ರೀಯ ಸಂಸ್ಥೆಯನ್ನು ಉದ್ಘಾಟಿಸುವರು. ಕೇಂದ್ರ ಸಚಿವರಾದ ಡಿ.ವಿ.ಸದಾನಂದ ಗೌಡ ಹಾಗೂ ಪ್ರಲ್ಹಾದ್ ಜೋಶಿ ಪಾಲ್ಗೊಳ್ಳುವರು. ಅಮೆರಿಕ, ಆಸ್ಟ್ರೇಲಿಯಾ, ಯುರೋಪ್, ಆಫ್ರಿಕಾ, ಹಾಗೂ ಏಷ್ಯಾ ಖಂಡದ ಪ್ರತಿನಿಧಿಗಳು ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ.
ಸುಸ್ಥಿರ ಪ್ರಗತಿ ಮಾದರಿ ಜಗತ್ತಿಗೆ ಪ್ರದರ್ಶನ:
ಬಡವರ್ಗದ ಜನರಿಗೆ ಆರ್ಥಿಕ ನೆರವು ಒದಗಿಸಿ, ಸ್ವಸಹಾಯ ಚಳವಳಿ ಮೂಲಕ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಆಧ್ಯಾತ್ಮಿಕವಾಗಿ ಅವರ ಬಡತನ ನಿಮೂಲನ ಮಾಡಲು ಅಂತಾರಾಷ್ಟ್ರಿ?ಯವಾಗಿ ಮಾದರಿ ಎನ್ನಿಸಿಕೊಂಡಿರುವುದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಎಸ್ ಕೆ ಡಿ ಆರ್ ಡಿ ಪಿ).
ಪಟ್ಟಾಭಿಷೇಕದ 50ನೇ ವರ್ಷದ ಆಚರಣೆ ವೇಳೆ ಶ್ರೀಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಈ ಸುಸ್ಥಿರ ಅಭಿವೃದ್ಧಿ ಮಾದರಿಯನ್ನು ಅಂತಾರಾಷ್ಟ್ರಿ?ಯವಾಗಿ ಜಗತ್ತಿನ ಮುಂದಿರಿಸುವ ಇಚ್ಛೆ ವ್ಯಕ್ತಪಡಿಸಿದ್ದರು. ಹೀಗೆ ಸ್ವಸಹಾಯ ಚಳವಳಿ ಅಂತಾರಾಷ್ಟ್ರೀ?ಯ ಸಮಾವೇಶದ ಪರಿಕಲ್ಪನೆ ರೂಪುಗೊಂಡಿದೆ.
ರಾಜ್ಯ ಸರ್ಕಾರ ಸ್ತ್ರೀಶಕ್ತಿ ಗುಂಪು ರಚಿಸುವುದಕ್ಕೂ ಮೊದಲೇ 1991ರಲ್ಲಿ ಪ್ರಾರಂಭಗೊಂಡು, ರಾಜ್ಯದಲ್ಲೆ ಮುಂಚೂಣಿಯ ಸ್ವಸಹಾಯ ಚಳವಳಿಯಾಗಿ ರೂಪುಗೊಂಡಿರುವುದು ಎಸ್ ಕೆ ಡಿ ಆರ್ ಡಿ ಪಿ. ಜನರಲ್ಲಿ ಆರ್ಥಿಕ ಶಿಸ್ತು ಮೂಡಿಸಿದ್ದು ಮುಖ್ಯ ಸಾಧನೆ. ಅದರೊಂದಿಗೆ ಜನರ ಪರಿಸ್ಥಿತಿ ಸುಧಾರಣೆ ಜತೆಗೆ ಸುಸ್ಥಿರ ಅಭಿವೃದ್ಧಿಗೆ ಮಾದರಿಯಾಗಿ ಬೆಳೆದುನಿಂತಿದೆ. ನಿಂತ ನೀರಾಗದೆ ಚಲನಶೀಲ ಶಕ್ತಿಯಾಗಿ ಅದನ್ನು ಡಾ.ಹೆಗ್ಗಡೆ ಮುಂದುವರಿಸಿದ್ದಾರೆ. ಸರ್ಕಾರಿ ಅನುದಾನಕ್ಕೆ ಕಟ್ಟುಬೀಳದೆ ಜನರಿಂದ ಜನರಿಗಾಗಿ ಮುಂದುವರಿಯುವಂತಾಗಿರುವುದು ಮಾದರಿ ಎಂದು ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ್ ತಿಳಿಸುತ್ತಾರೆ.
ಈ ಮಾದರಿಯನ್ನು ಅಂತಾರಾಷ್ಟ್ರೀಯ ಸಮಾವೇಶದಲ್ಲಿ ತ ಜ್ಞ ರು, ಎನ್ ಜಿ ಒ ಗಳು, ಇತರ ಪಾಲುದಾರರ ಮುಂದೆ ಇರಿಸಲಾಗುವುದು. ಮೈ ಕ್ರೋ ಫೈನಾನ್ಸ್ ಎನ್ನುವುದು ವಿದೇಶಗಳಲ್ಲಿ ದೊಡ್ಡ ಬಂಡವಾಳ ಹೂಡಿಕೆದಾರರಿಂದ ನಡೆಯುವ ಲಾಭ ಆಧರಿತ ಉದ್ಯಮ. ಆದರೆ ನಾವು ಅದನ್ನು ಲಾಭ ಇಲ್ಲದೆ ಮಾಡಲು ಸಾಧ್ಯ ಎಂದು ತೋರಿಸಿದ್ದೇವೆ. ಅದಕ್ಕಾಗಿ ವಿದೇಶಗಳಿಂದ ಜನ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸ್ವಸಹಾಯ ಚಳವಳಿಯನ್ನು ಬ್ಯಾಂಕ್ ಜೊತೆ ಬೆಸೆದದ್ದನ್ನು ತೋರಿಸಲಿದ್ದೇವೆ ಎಂದರು.
ಈ ಮಾದರಿಯ ಬಗ್ಗೆ ತರಬೇತಿ, ಮಾರ್ಗದರ್ಶನ ನೀಡಲು ಇಂಟರ್ ನ್ಯಾಷನಲ್ ಇನ್ ಕ್ಯುಬೇಶನ್ ಕೇಂದ್ರವನ್ನೂ ಸಮಾವೇಶದ ಕೊನೆಯಲ್ಲಿ ಉದ್ಘಾಟಿಸಲಾಗುವುದು. ಅದು ಧಾರಾವಾಡದಲ್ಲಿ ಕಾರ್ಯವೆಸಗಲಿದೆ. ಈಗಾಗಲೇ 95ರಷ್ಟು ವಿದೇಶಿ ಪ್ರತಿನಿಧಿಗಳು, 300ರಷ್ಟು ಭಾರತೀಯ ಪ್ರತಿನಿಧಿಗಳು ನೋಂದಣಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.


