ಬದಿಯಡ್ಕ: ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಕುಂಬಳೆ ಉಪಜಿಲ್ಲಾ ಘಟಕದ ನೂತನ ಸಮಿತಿಯ ಪ್ರಥಮ ಸಭೆಯು ನವಜೀವನ ಪ್ರೌಢಶಾಲೆಯಲ್ಲಿ ನಡೆಯಿತು.
ಸಭೆಯಲ್ಲಿ ಕಲೋತ್ಸವದ ಯಶಸ್ಸಿ ಬಗ್ಗೆ ಚರ್ಚಿಸಲಾಯಿತು. ಇತ್ತೀಚೆಗೆ ಕನ್ನಡಿಗರ ಮೇಲೆ ಕೇರಳ ಪಿಎಸ್‍ಸಿ ಮೂಲಕ ನಡೆಸಲಾದ ಅಧ್ಯಾಪಕರ ನೇಮಕಾತಿ, ಗುಮಾಸ್ತ ಹುದ್ದೆ ಪರೀಕ್ಷೆಯಲ್ಲಿ ನಡೆದ ಅನ್ಯಾಯಗಳನ್ನು ಖಂಡಿಸಲಾಯಿತು. ಕೇರಳ ಪಿಎಸ್‍ಸಿಯಲ್ಲಿ ಇತ್ತೀಚೆಗೆ ವ್ಯಾಪಕ ಅವ್ಯವಹಾರ ನಡೆಯುತ್ತಿದೆಯೇ ಎಂಬ ಗುಮಾನಿಯನ್ನು ಸಭೆ ವ್ಯಕ್ತಪಡಿಸಿತು. ಈ ವಿಚಾರದಲ್ಲಿ ನಡೆಯುತ್ತಿರುವ ಹೋರಾಟಗಳಿಗೆ ತನ್ನ ಪೂರ್ಣ ಬೆಂಬಲವನ್ನು ನೀಡುವುದೆಂದು ತೀರ್ಮಾನಿಸಲಾಯಿತು.
ಸಂಘಟನೆಯ ಈ ವರ್ಷದ ಪ್ರಧಾನ ಚಟುವಟಿಕೆಯಾಗಿ ನವೆಂಬರ 9 ಮತ್ತು 10ರಂದು ಟೆಟ್ ಪರೀಕ್ಷಾ ತರಬೇತಿ, ಜನವರಿ 11 ಮತ್ತು 12ರಂದು ಎಲ್‍ಎಸ್‍ಎಸ್-ಯುಎಸ್‍ಎಸ್ ತರಬೇತಿ, ಜನವರಿ 5, 19 ಮತ್ತು 26ರಂದು ಕ್ರಮವಾಗಿ ಪೆರ್ಲ, ಬದಿಯಡ್ಕ, ಮುಳ್ಳೇರಿಯ ಕೇಂದ್ರಗಳಲ್ಲಿ ಕನ್ನಡಿಗರ ಹಕ್ಕು, ಸವಲತ್ತುಗಳ ಕುರಿತು ಜಾಗೃತಿ ಮೂಡಿಸುವ ಮಾಹಿತಿ ಶಿಬಿರವನ್ನು ವಿದ್ಯಾರ್ಥಿಗಳಿಗೆ, ಹೆತ್ತವರಿಗೆ ಹಾಗೂ ಸಾರ್ವಜನಿಕರಿಗಾಗಿ ನಡೆಸಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಅಧ್ಯಕ್ಷ ಶಿವಕುಮಾರ, ಕಾರ್ಯದರ್ಶಿ ಶ್ರೀಶ ಪಂಜಿತ್ತಡ್ಕ, ಕೋಶಾಧಿಕಾರಿ ಶರತ್ ಕುಮಾರ್, ಸದಸ್ಯರಾದ ಶ್ಯಾಮಲ ಮವ್ವಾರು, ಪ್ರಭಾವತಿ ಕೆದಿಲಾಯ ಪುಂಡೂರು, ವೆಂಕಟರಾಜ ವಿ, ಮಹಾಗಣಪತಿ ಮತ್ತಿತರರು ಅಭಿಪ್ರಾಯ ಮಂಡಿಸಿದರು.


