ಮಂಜೇಶ್ವರ: ಕಳ್ಳ ಮತದಾನಕ್ಕೆ ಶ್ರಮಿಸಿದ್ದಾರೆ ಎಂದು ಚುನಾವಣಾ ಮತಗಟ್ಟೆ ಅಧಿಕೃತರ ಹೇಳಿಕೆ ಮೇರೆಗೆ ಯುವತಿಯನ್ನು ಪೋಲಿಸರು ಬಂಧಿಸಿದ ಘಟನೆ ಸೋಮವಾರ ವರ್ಕಾಡಿ ಗ್ರಾ.ಪಂ ಪರಿಯ ಮತಗಟ್ಟೆಯಲ್ಲಿ ನಡೆದಿದೆ.
ವರ್ಕಾಡಿ ಪಾತೂರು 42 ನೇ ಮತಗಟ್ಟೆಯಲ್ಲಿ ಮತ ಚಲಾಯಿಸಲು ಆಗಮಿಸಿದ ಬದ್ರಿಯಾ ನಿವಾಸದ ಅಬೂಬಕರ್ ಸಿದ್ದೀಕ್ ಅವರ ಪತ್ನಿ ನೆಬಿಸಾ(36) ಬಂಧನಕ್ಕೊಳಗಾದ ಯುವತಿ. ಸೋಮವಾರ ಮಧ್ಯಾಹ್ನ 2 ರ ಸುಮಾರಿಗೆ ಘಟನೆ ನಡೆದಿದೆ. ನೆಬಿಸಾ ಎಂಬ ಹೆಸರಿನ ಮತ್ತೋರ್ವ ಮಹಿಳೆಯ ಮತ ಚಲಾಯಿಸಲು ಈ ಮಹಿಳೆ ಆಗಮಿಸಿದ್ದರೆನ್ನಲಾಗಿದೆ. ಬಂಧಿತಳಾದ ಮಹಿಳೆ ನೆಬಿಸಾರಿಗೆ 42 ನೇ ಸಂಖ್ಯೆಯ ಮತಗಟ್ಟೆಯಲ್ಲಿ ಮತದಾನವಿರಲಿಲ್ಲ ಎನ್ನಲಾಗಿದೆ. ಮತಗಟ್ಟೆಯ ಅಧಿಕೃತರ ಮಾಹಿತಿ ಮೇರೆಗೆ ಬಂಧಿಸಲ್ಪಟ್ಟ ಮಹಿಳೆಯನ್ನು ನಂತರ ಮಂಜೇಶ್ವರ ಪೋಲಿಸ್ ಠಾಣೆಗೆ ಕರೆದೊಯ್ದು ವ್ಯಕ್ತಿಪಲ್ಲಟ ಕಾನೂನಿನಡಿ ದೂರು ದಾಖಲಿಸಲಾಯಿತು. ಒಂದು ರಾಜಕೀಯ ಪಕ್ಷದ ವೋಟಿಂಗ್ ಸ್ಲಿಪ್ ಒಪ್ಪಿಸಿ ಕಳ್ಳ ಮತದಾನವನ್ನು ನಡೆಸಲು ನೆಬಿಸಾ ಪ್ರಯತ್ನಿಸಿದ್ದಳು ಎಂದು ಪ್ರಿಸೈಂಡಿಗ್ ಅಧಿಕಾರಿ ತಿಳಿಸಿದ್ದಾರೆ.
ಪತ್ರಿಕಾ ಮಾಧ್ಯಮಗಳೊಂದಿಗೆ ಮಾತನಾಡಿದ ಕಾಸರಗೋಡು ಲೋಕಸಭಾ ಸಂಸದ ರಾಜಮೋಹನ್ ಉಣ್ಣಿತ್ತಾನ್ ನೆಬಿಸಾ ಎಂಬ ಮಹಿಳೆ ನಿರಪರಾಧಿಯಾಗಿರುವ ಸಾಧ್ಯತೆಯಿದೆ. ಪೋಲಿಸ್ ಅಧಿಕೃತರು ಸೂಕ್ತ ರೀತಿಯಲ್ಲಿ ಪರಾಮರ್ಶಿಸಿ ದೂರು ದಾಖಲಿಸಬೇಕಿದೆ ಎಂದು ವಿನಂತಿಸಿದ್ದಾರೆ. ನೆಬಿಸಾ ಎಂಬ ಹೆಸರಿನ ಇಬ್ಬರು ಮಹಿಳೆಯರಿಗೆ ಒಂದೇ ಮತಗಟ್ಟೆಯಲ್ಲಿ ಮತದಾನ ಹಕ್ಕಿರುವ ಸಾಧ್ಯತೆಗಳಿವೆ. ಮತದಾನಕ್ಕೆ ಅಗತ್ಯವಿರುವ ಚುನಾವಣಾ ಸ್ಲಿಪ್ ಅದಲು ಬದಲಾಗಿರುವ ಕಾರಣ ಈ ಆರೋಪ ಎದುರಾಗಿರುವ ಸಾಧ್ಯತೆ ಇದೆ ಎಂದು ಸಂಸದರು ತಿಳಿಸಿದ್ದಾರೆ.
ನಕಲಿ ಮತದಾನಗೈದ ನಫೀಸಾ ಅವರನ್ನು ಸಂರಕ್ಷಿಸಲು ಸಿಪಿಎಂ ಹಾಗೂ ಪೊಲೀಸ್ ಯತ್ನಿಸುತ್ತಿದೆ-ನ್ಯಾಯವಾದಿ. ಕೆ. ಶ್ರೀಕಾಂತ್
ಮಂಜೇಶ್ವರ : ನಕಲಿ ಮತದಾನಗೈಯ್ಯಲೆತ್ನಿಸಿದ ನಫೀಸಾ ಅವರನ್ನು ಸಂರಕ್ಷಿಸಲು ಸಿಪಿಎಂ ಹಾಗೂ ಪೊಲೀಸ್ ಯತ್ನಿಸುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ್ ಆರೋಪಿಸಿದ್ದಾರೆ.
ಮಂಜೇಶ್ವರ ಮಂಡಲದ 42 ನೇ ಬೂತಿನಲ್ಲಿ ನಕಲಿ ಮತದಾನಗೈದ ನಫೀಸಾ ಮುಸ್ಲಿಂ ಲೀಗ್ ಸಕ್ರೀಯ ಕಾರ್ಯಕರ್ತೆ ಎಂದೂ ವರುಷಗಳಿಂದಾಗಿ ಚುನಾವಣೆಯನ್ನು ಬುಡಮೇಲುಗೊಳಿಸಲು ಯತ್ನಿಸುತ್ತಿರುವ ಮುಸ್ಲಿಂ ಲೀಗ್ ಪಕ್ಷದ ಮುಖವಾಡ ಬಹಿರಂಗಗೊಂಡಿದೆ ಎಂದು ಅವರು ಹೇಳಿದರು. ಹಾಗೂ ಚುನಾವಣೆಯ ಸಂಧರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಕಲಿ ಮತದಾನ ಗೈಯ್ಯಲು ಮುಸ್ಲಿಂ ಲೀಗ್ ಮೊದಲೇ ಹೊಂಚು ಹಾಕಿದ್ದರು ಎಂಬುವುದಾಗಿ ಬಿಜೆಪಿ ಸಂಬಂಧಪಟ್ಟ ಉದ್ಯೋಗಸ್ಥರಿಗೆ ಮಾಹಿತಿಯನ್ನು ತಿಳಿಸಲಾಗಿದೆ. ಬಂಧಿಸಲ್ಪಟ್ಟ ಆರೋಪಿಯಾದ ನಫೀಸಾನನ್ನು ರಕ್ಷಿಸಲು ಮುಸ್ಲಿಂ ಲೀಗ್ , ಕಾಂಗ್ರೆಸ್, ಮಾಕ್ರ್ಸಿಸ್ಟ್ ಪಕ್ಷಗಳ ಉನ್ನತ ನಾಯಕರು ರಾಜ್ ಮೋಹನ್ ಉಣ್ಣಿತ್ತಾನ್ ಎಂ ಪಿ ಯು ಭಗೀರಥ ಪ್ರಯತ್ನ ನಡೆಸಿದ್ದಾರೆಂದು ಶ್ರೀಕಾಂತ್ ಹೇಳಿದರು.
ಈ ಪಕ್ಷಗಳ ಸೇವಾ ಸಂಘಟನೆಯ ಉದ್ಯೋಗಸ್ಥರು ನಕಲಿ ಮತದಾನಕ್ಕೆ ಸಹಾಯ ಒದಗಿಸಿದ್ದಾರೆಂದೂ, ಕೆಲವು ಪೊಲೀಸ್ ಉದ್ಯೋಗಸ್ಥರು ಕೇಸು ಇಲ್ಲದಾಗಿಸಿ ಮುಸ್ಲಿಂ ಲೀಗ್ ಕಾರ್ಯಕರ್ತೆಯನ್ನು ರಕ್ಷಿಸಲು ಮುಂದಾಗಿದ್ದಾರೆಂದೂ ಶ್ರೀಕಾಂತ್ ಆರೋಪಿಸಿದರು.
ಕಾಂಗ್ರೆಸ್, ಸಿ ಪಿ ಎಂ ನಕಲಿಮತದಾನವನ್ನು ಬೆಂಬಲಿಸುತಿದೆ ಎಂದೂ ನಕಲಿ ಮತದಾನ ನಡೆಸಲು ಮುಂದಾಗುವ ಆರೋಪಿಗಳಿಗೆ ತಕ್ಕ ಶಿಕ್ಷೆಯನ್ನು ನೀಡಲು ಚುನಾವಣಾ ಆಯೋಗವು ಮುಂದಾಗಬೇಕೆಂದು ಶ್ರೀಕಾಂತ್ ಆಗ್ರಹಿಸಿದ್ದಾರೆ.


