ಕಾಸರಗೋಡು: ಮಂಜೇಶ್ವರ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ನಡೆಯುವ ಅ.21ರಂದು ಮತಗಟ್ಟೆಗಳ 100 ಮೀಟರ್ ವ್ಯಾಪ್ತಿಯಲ್ಲಿ ಪೋಲಿಂಗ್ ಏಜೆಂಟರು ಬಳಸುವ ಮೊಬೈಲ್ ಫೋನ್ ಸಹಿತ ವಿದ್ಯುನ್ಮಾನ ಉಪಕರಣಗಳನ್ನು ತರಬಾರದು ಎಂದು ಜಿಲ್ಲಾ ಚುನಾವಣೆ ಅಧಿಕಾರಿಯಾಗಿರುವ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.
ಈ ಆದೇಶ ಉಲ್ಲಂಘಿಸಿ ಯಾರಾದರೂ ಈ ವ್ಯಾಪ್ತಿಯೊಳಗೆ ಮೊಬೈಲ್ ಇತ್ಯಾದಿ ತಂದಲ್ಲಿ ಮತಗಟ್ಟೆಯಲ್ಲಿ ಕರ್ತವ್ಯದಲ್ಲಿರುವ ಪೊಲೀಸರು ಇವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲಿದ್ದಾರೆ ಎಂದವರು ಕಠಿಣ ಆದೇಶ ನೀಡಿರುವರು. ಮತದಾತರಿಗೆ, ಚುನಾವನೆ ಆಯೋಗ ಅಂಗೀಕಾರ ನೀಡಿರುವ ವ್ಯಕ್ತಿಗಳಿಗೆ ಮಾತ್ರ ಮತಗಟ್ಟೆಯ 100 ಮೀಟರ್ ವ್ಯಾಪ್ತಿಯಲ್ಲಿ ಪ್ರವೇಶಾತಿ ಇರುವುದು. ಈ ವ್ಯಾಪ್ತಿಯಲ್ಲಿ ಖಾಸಗಿ ವಾಹನಗಳಿಗೆ ಪ್ರವೇಶಾತಿ ಇರುವುದಿಲ್ಲ. ಮತದಾತರನ್ನು ಆಮಿಷಕ್ಕೊಳಪಡಿಸುವ ಯಾವುದೇ ಚಟುವಟಿಕೆಗಳಿಗೆ ಅನುಮತಿ ನೀಡುವುದಿಲ್ಲ. ಮತಗಟ್ಟೆಯ 200 ಮೀಟರ್ ವ್ಯಾಪ್ತಿಯಲ್ಲಿ ರಾಜಕೀಯ ಪಕ್ಷಗಳ ಬೂತ್ ಗಳನ್ನು ಸ್ಥಾಪಿಸಬಾರದು. ಅದಕ್ಕಿಂತ ಹೊರಬದಿಯಲ್ಲಿ ಬೂತ್ ಸ್ಥಾಪಿಸುವುದಿದ್ದಲ್ಲಿ ಅಬ್ಯರ್ಥಿಯ, ರಾಜಕೀಯ ಪಕ್ಷದ ಚಿಹ್ನೆ, ಧ್ವಜ, ತೋರಣ ಇತ್ಯಾದಿ ಸ್ಥಾಪಿಸಕೂಡದು. ಪ್ರಿಸೈಡಿಂಗ್ ಆಫೀಸರ್ ಒಪ್ಪಿದಲ್ಲಿ ಮಾತ್ರ ಸಹಾಯಕ(ಕಂಪೇನಿಯನ್) ನನ್ನು ಕರೆತರಬಹುದು. ಸಹಾಯಕನ ಸಹಿತ ಬರುವ ಮತದಾರ ತಮ್ಮಮತದಾನ ನಡೆಸುಆಗ ಸಾಲಿನಲ್ಲೇ ಬರಬೇಕು. ಒಬ್ಬ ಮತದಾತನಿಗೆ ಒಬ್ಬರಿಗಿಂತ ಅಧಿಕ ಸಹಾಯಕರು ಇರಕೂಡದು. ಸಹಾಯಕನ ಬಲಗೈಯ ತೋರು ಬೆರಳಿಗೆ ಶಾಯಿಯ ಗುರುತು ದಾಖಲಾಗುವುದು. 60 ವರ್ಷಕ್ಕಿಂತ ಅಧಿಕ ವಯೋಮಾನದವರು, ವಿಶೇಷಚೇತನರು ಮತದಾನಕ್ಕಾಗಿ ಸಾಲಿನಲ್ಲಿ ಬರಬೇಕಿಲ್ಲ. 6 ಗಂಟೆಯ ನಂತರವೂ ಮತದಾತರರ ಸಾಲು ಕಂಡುಬಂದಲ್ಲಿ ಪ್ರಿಸೈಡಿಂಗ್ ಆಫೀಸರ್ ಸಹಿ ಮಾಡಿದ ಟೋಕನ್ ವಿತರಿಸಲಾಗುವುದು. ಟೋಕನ್ ಪಡೆದವರು ಮತದಾನ ನಡೆಸಿದ ನಂತರವಷ್ಟೇ ಮತಗಟ್ಟೆಯಿಂದ ಹೊರಕ್ಕೆ ತೆರಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜನವಾಸ ಕೇಂದ್ರಗಳಲ್ಲಿ ನಿಗಾ ಆರಂಭ:
ಕಾಸರಗೋಡು, ಹೊಸದುರ್ಗ, ವೆಳ್ಳರಿಕುಂಡ್ ತಾಲೂಕುಗಳಲ್ಲಿ ಕಂದಾಯ ಇಲಾಖೆ ಸಿಬ್ಬಂದಿಯ ಮೂಲಕ ನಿಗಾ ಇರಿಸುವ ಪ್ರಕ್ರಿಯೆ ಶನಿವಾರ ಆರಂಭಗೊಂಡಿದೆ. ಮಂಜೇಶ್ವರ ವಿಧಾನಸಭೆ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿ ಜನವಾಸ ಪ್ರದೇಶಗಳಲ್ಲಿ ಹಣ, ಮದ್ಯ ಇತ್ಯಾದಿಗಳನ್ನು ಬಳಸಿ ಮತದಾತರಿಗೆ ಆಮಿಷವೊಡ್ಡುವ ಕ್ರಮವನ್ನು ತಡೆಯುವ ನಿಟ್ಟಿನಲ್ಲಿ ಈ ಕ್ರಮ ಆರಂಭಗೊಂಡಿದೆ. ಅ.21ರಂದು ಮತದಾನ ಪ್ರಕ್ರಿಯೆ ಮುಗಿಯುವ ವರೆಗೆ ಈ ನಿಗಾ ಮುಂದುವರಿಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಮತದಾತರಲ್ಲದೇ ಇರುವವರು ಕ್ಷೇತ್ರ ಬಿಟ್ಟು ತೆರಳಬೇಕು:
ಮಂಜೇಶ್ವರ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯ ಅಣಗವಾಗಿ ಅಭ್ಯರ್ಥಿಗಳ ಪ್ರಚಾರ ಸಮಾಪ್ತಿಗೊಂಡ ನಂತರ ಸದ್ರಿ ಕ್ಷೇತ್ರದ ಮತದಾತರಲ್ಲದೇ ಇರುವ ಎಲ್ಲರೂ ಕ್ಷೇತ್ರದಿಂದ ತೆರಳುವಂತೆ ಜಿಲ್ಲಾಧಿಕಾರಿ ತಿಳಿಸಿರುವರು.
ವೀಡಿಯೋ ಚಿತ್ರೀಕರಣ:
ಮಂಜೇಶ್ವರ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಅ.21ರಂದು ನಡೆಯುವ ವೇಳೆ ಎಲ್ಲ ಮತಗಟ್ಟೆಗಳಲ್ಲಿ ಮತದಾನದ ವೀಡಿಯೋ ಚಿತ್ರೀಕರಣ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.

