ಕಾಸರಗೋಡು: ಗಡಿನಾಡು ಕಾಸರಗೋಡಿನ ವಿವಿಧ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಬೋಧನೆಗೆ ಕನ್ನಡ ಅರಿಯದ ಶಿಕ್ಷಕರನ್ನು ನೇಮಿಸಿರುವ ಬಗ್ಗೆ ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಕೇರಳದ ಶಿಕ್ಷಣ ಸಚಿವರನ್ನು ಪತ್ರದ ಮೂಲಕ ತಮ್ಮ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಕಾಸರಗೋಡಿನ ಕನ್ನಡ ಪ್ರದೇಶಗಳಾದ ಬೇಕಲ, ಉದಮ ಮತ್ತಿತರ ಕಡೆಗಳ ಕನ್ನಡ ಮಾಧ್ಯಮ ಶಾಲೆಗಳಿಗೆ ಕನ್ನಡ ಬಾರದ ಶಿಕ್ಷಕರನ್ನು ನೇಮಿಸಿದ್ದು, ಅದು ಅಲ್ಲಿನ ಕನ್ನಡಿಗರನ್ನು ಆಕ್ರೋಶಕ್ಕೊಳಗಾಗುವಂತೆ ಮಾಡಿದೆ. ಕನ್ನಡ ಮಾಧ್ಯಮ ಶಾಲೆಗಳಿಗೆ ಕನ್ನಡ ಬಲ್ಲ ಶಿಕ್ಷರನ್ನು ಮಾತ್ರ ನೇಮಿಸಬೇಕೆಂದು ಕೇರಳ ಶಿಕ್ಷಣ ಸಚಿವ ಪ್ರೊ. ಸಿ.ರವೀಂದ್ರನಾಥ್ ಅವರನ್ನು ಪತ್ರದ ಮೂಲಕ ಆಗ್ರಹಿಸಿದ್ದಾರೆ. ಈ ಹಿಂದೆಯೂ ಕನ್ನಡ ವಿಭಾಗದಲ್ಲಿ ಬೋಧನೆಗೆ ಮಲಯಾಳ ಶಿಕ್ಷಕರನ್ನು ನೇಮಕಮಾಡಲಾಗಿದ್ದು, ಈ ಬಗ್ಗೆ ವಿದ್ಯಾರ್ಥಿಗಳು ಹಾಗೂ ಹೆತ್ತವರು ನಡೆಸಿದ ಪ್ರತಿಭಟನೆಯಿಂದ ಈ ಶಿಕ್ಷಕರನ್ನು ವಾಪಾಸುಕರೆಸಿಕೊಂಡಿದ್ದರೂ, ಮತ್ತೆ ಕನ್ನಡ ಅರಿಯದ ಶಿಕ್ಷಕರನ್ನು ನೇಮಿಸುವ ಮೂಲಕ ಕನ್ನಡ ವಿದ್ಯಾರ್ಥಿಗಳ ಪಾಲಿಗೆ ಸಂಕಷ್ಟ ತಂದೊಡ್ಡಲಾಗಿದೆ. ಇಂತಹ ಧೋರಣೆ ಎರಡೂ ವಿಭಾಗಗಳ ಮಧ್ಯೆ ವೈಷಮ್ಯ ಹಾಗೂ ಸಾಂಸ್ಕøತಿಕ ಸಂಬಂಧ ಹದಗೆಡಲು ಹಾದಿಮಾಡಿಕೊಡಲಿದೆ. ಈ ಬಗ್ಗೆ ಸರ್ಕಾರ ಮಧ್ಯಪ್ರವೇಶಿಸಿ, ನಿಯೋಜಿತ ಕನ್ನಡ ಅರಿಯದ ಶಿಕ್ಷಕರನ್ನು ಹಿಂದಕ್ಕೆ ಕರೆಸಿ, ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿಕೊಡುವಂತೆ ಸಚಿವ ಎಸ್. ಸುರೇಶ್‍ಕುಮಾರ್ ಮನವಿ ಮಾಡಿದ್ದಾರೆ.
ಕಾಸರಗೋಡು ಜಿಲ್ಲೆಯ ಬೇಕಲ್ ಫಿಶರೀಸ್ ಹೈಯರ್ ಸೆಕೆಂಡರಿ ಶಾಲೆ ಹಾಗೂ ಉದುಮ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕನ್ನಡ ಮಾಧ್ಯಮ ವಿಭಾಗಕ್ಕೆ ಕನ್ನಡ ಭಾಷೆ ತಿಳಿಯದ ಅಧ್ಯಾಪಕರನ್ನು ನೇಮಿಸಿರುವುದರಿಂದ ಕನ್ನಡ ಭಾಷಾ ವಿದ್ಯಾರ್ಥಿಗಳು ಹೆಚ್ಚಿನ ಸಮಸ್ಯೆ ಎದುರಿಸುತ್ತಿದ್ದಾರೆ.


