ಕಾಸರಗೋಡು: ಜಿಲ್ಲೆಯಲ್ಲಿ ಕನ್ನಡ ಮಾಧ್ಯಮ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿ ಮರುಕಳಿಸುತ್ತಿರುವ ಸಮಸ್ಯೆಗೆ ಲೋಕಸೇವಾ ಆಯೋಗದ ಕರ್ತವ್ಯಲೋಪ ಕಾರಣವೆಂದು ಅಖಿಲ ಕೇರಳ ಶಾಲಾ ಶಿಕ್ಷಕರ ಯೂನಿಯನ್(ಎಕೆಎಸ್‍ಟಿಯು)ಕಾಸರಗೋಡು ಜಿಲ್ಲಾ ಸಮಿತಿ ಮುಖಂಡರು ತಿಳಿಸಿದ್ದಾರೆ.
ಕನ್ನಡದ ಬಗ್ಗೆ ಅರಿವು ಮಾತ್ರ ಸಾಕು ಎಂಬ ಪಿಎಸ್‍ಸಿ ಧೋರಣೆ ಅಭ್ಯರ್ಥಿಗಳ ಆಯ್ಕೆ ಸಂದರ್ಭ ಸಮಸ್ಯೆಗೆ ಕಾರಣವಾಗುತ್ತಿದೆ. ಕನ್ನಡ ಭಾಷೆ, ಸಾಹಿತ್ಯದ ಬಗ್ಗೆ ಜ್ಞಾನವಿಲ್ಲದವರು ಹಾಗೂ ಕನ್ನಡ ಶಿಕ್ಷಕರ ನೇಮಕಾತಿಯ ಮಾನದಂಡ ಅನುಸರಿಸದೆ, ಪರೀಕ್ಷೆ ಬರೆದವರನ್ನು ಯಾದಿಯಲ್ಲಿ ಸೇರ್ಪಡೆಗೊಳಿಸಿರುವುದರಿಂದ ಸಮಸ್ಯೆ ಎದುರಾಗುತ್ತಿದೆ. ಭಾಷಾ ತಜ್ಞರು ನಡೆಸುವ ಸಂದರ್ಶನದ ಆಧಾರದಲ್ಲಿ ಇವರ ನೇಮಕಾತಿ ನಡೆಯಬೇಕಾಗಿದ್ದರೂ, ಇದಕ್ಕೆ ವ್ಯತಿರಿಕ್ತವಾಗಿ ನೇಮಕಾತಿ ನಡೆಯುತ್ತಿದೆ. ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು. ಈ ಬಗ್ಗೆ ಪಿಎಸ್‍ಸಿ ತನ್ನ ವಿಜ್ಞಾಪನೆಯಲ್ಲಿ ಅಗತ್ಯದ ಮಾರ್ಪಾಡು ತಂದುಕೊಳ್ಳಲು ಮುಂದಾಗಬೇಕು ಎಂದೂ ಸಂಘಟನೆ ಜಿಲ್ಲಾ ಸಮಿತಿ ಅಧ್ಯಕ್ಷ ಕೆ. ವಿನೋದ್ ಕುಮಾರ್ ಹಾಗೂ ಕಾರ್ಯದರ್ಶಿ ಸುನಿಲ್‍ಕುಮಾರ್ ಕರಿಚ್ಚೇರಿ ಆಗ್ರಹಿಸಿದ್ದಾರೆ.

