ಕಾಸರಗೋಡು: ನಮ್ಮ ಸಂಕಷ್ಟಗಳನ್ನು ಮಠಾಧೀಶರ ಜತೆ ಹಂಚಿಕೊಂಡಾಗ ಮನಸ್ಸು ಮತ್ತಷ್ಟು ಹಗುವಾಗುವುದರ ಜತೆಗೆ ಮನ:ಶಾಂತಿ ಲಭಿಸಲು ಸಾಧ್ಯವಾಗುತ್ತದೆÉಂದು ಖ್ಯಾತ ಚಲನಚಿತ್ರನಟ, ನಿರ್ದೇಶಕ ಕಾಸರಗೋಡು ಚಿನ್ನಾ ತಿಳಿಸಿದ್ದಾರೆ. ಅವರು ಇತ್ತೀಚೆಗೆ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಿಂದ ನೀಡಿದ 'ಶ್ರೀಗುರುದೇವಾನುಗ್ರಹ'ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಜನಸಾಮಾನ್ಯರ ನೋವುಗಳಿಗೆ ಸ್ಪಂದಿಸುತ್ತಿರುವ ಮಠಗಳನ್ನು ಜನತೆ ತಮ್ಮ ಶ್ರದ್ಧಾತಾಣಗಳಾಗಿ ಪರಿಗಣಿಸಿದಾಗ ಮಠಗಳ ಅಸ್ತಿತ್ವವೂ ಬಲಗೊಳ್ಳಲು ಕಾರಣವಾಗುತ್ತದೆ ಎಂದು ತಿಳಿಸಿದರು.
ಪ್ರಶಸ್ತಿಪ್ರದಾನ ಮಾಡಿದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ವ್ಯಕ್ತಿಯನ್ನು ನೋಡುವುದಕ್ಕಿಂತ, ಆತನ ವ್ಯಕ್ತಿತ್ವವನ್ನು ಗುರುತಿಸುವುದರ ಜತೆಗೆ ಆತನ ಸಾಧನೆಯನ್ನು ಗೌರವಿಸುವ ಕೆಲಸ ನಡೆಯಬೇಕು. ಮಠ ಎಂಬುದು ಜನರಿಂದ ಬೆಳೆದು ಬಂದ ತಾಣವಾಗಿದೆ. ಇಲ್ಲಿ ಜನರಿಂದ ಪಡೆದಿರುವುದನ್ನು ಸಮಾಜಕ್ಕೆ ಸಮರ್ಪಿಸುವ ಕೆಲಸ ನಡೆಯುತ್ತಿದ್ದು, ಇದರಲ್ಲಿ ಆತ್ಮತೃಪ್ತಿ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಕಲಾವಿದರು, ಸಾಹಿತಿಗಳ ಸಹಿತ ವಿವಿಧ ರಂಗಗಳಲ್ಲಿ ಸಾಧನೆ ನಡೆಸಿದವರನ್ನು ಗುರುತಿಸುವುದರ ಜತೆಗೆ ಸೂರಿಲ್ಲದವರಿಗೆ ಸೂರು ನಿರ್ಮಿಸಿಕೊಡುವ ಕೆಲಸವನ್ನೂ ಮಠ ನಡೆಸುತ್ತಿದೆ ಎಂದು ತಿಳಿಸಿದರು.
ಖ್ಯಾತ ವಿದುಷಿ ಸಾವಿತ್ರಿ ಈಶ್ವರ ಭಟ್, ಯಕ್ಷಗಾನ ಕಲಾವಿದ ಸೀತಾರಾಮ ಕಟೀಲ್, ತುಳುರಂಗ ಭೂಮಿಯ ಸಂಘಟಕ ಕೃಷ್ಣ ಜಿ.ಮಂಜೇಶ್ವರ, ಚಿತ್ರಕಲಾವಿದ ತಾರಾನಾಥ ಕೈರಂಗಳ, ಪತ್ರಕರ್ತ ಶಶಿಧರ ಪೊಯ್ಯೆತ್ತಬೈಲ್ ಅವರನ್ನು ಸ್ವಾಮೀಜಿ ಗೌರವಿಸಿದರು. ಪೂಜ್ಯ ಸಾಧ್ವಿ ಮಾತಾನಂದಮಯೀ ಆಶೀರ್ವಚನ ನೀಡಿದರು. ಉದ್ಯಮಿ ವಾಮಯ್ಯ ಶೆಟ್ಟಿ ಮುಂಬಯಿ ಉಪಸ್ಥಿತರಿದ್ದರು. ಉದ್ಯಮಿ ವಆಮಯ್ಯ ಶೆಟ್ಟಿ ದಂಪತಿ ಕೊಡುಗೆಯಾಗಿ ನೀಡಿದ ಪುಷ್ಕರಿಣಿಯನ್ನು ಲೋಕಾರ್ಪಣೆಗೊಳಿಸಲಾಯಿತು. ಪತ್ರಕರ್ತ ಯಶುವಿಟ್ಲ ಸವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.


