ಕಾಸರಗೋಡು: ಕೋವಿಡ್-19 ವೈರಸ್ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಕಾಸರಗೋಡು ಜನರಲ್ ಆಸ್ಪತ್ರೆಯನ್ನು ಕೋವಿಡ್ ಚಿಕಿತ್ಸೆಗೆ ಮೀಸಲಿರಿಸುವ ಬಗ್ಗೆ ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ. ಜನರಲ್ ಆಸ್ಪತ್ರೆಯಲ್ಲಿ ಕೋವಿಡ್19 ವೈರಸ್ ಬಾಧಿತರಿಗೆ ಮಾತ್ರ ಚಿಕಿತ್ಸೆ ನೀಡುವಂತೆ ಸಜ್ಜುಗೊಳಿಸುತ್ತಿದ್ದಲ್ಲಿ, ಇಲ್ಲಿರುವ ಇತರ ರೋಗಿಗಳನ್ನು ಕಾಞಂಗಾಡಿನ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಬೇಕಾಗಿ ಬರಲಿದೆ. ಜತೆಗೆ ಓಪಿ ಸಹಿತ ಎಲ್ಲ ಚಿಕಿತ್ಸೆಗಳೂ ಜಿಲ್ಲಾಸ್ಪತ್ರೆಯಲ್ಲಿ ಲಭ್ಯವಾಗಲಿದೆ. ಈಗಾಗಲೇ ವಿದೇಶದಿಂದ ಆಗಮಿಸಿರುವವರ ಮೇಲೆ ನಿಗಾವಹಿಸಲು ಶಾಲಾ ಕಾಲೇಜುಗಳಲ್ಲಿ ವಾರ್ಡುಗಳನ್ನು ಆರಂಭಿಸಲು ತೀರ್ಮಾನಿಸಿದ್ದರೂ, ಹಾಸಿಗೆಗಳ ಕೊರತೆಯಿಂದ ಇವರೆಲ್ಲರನ್ನೂ ಅವರ ಮನೆಗಳಲ್ಲಿ ಉಳಿದುಕೊಳ್ಳುವಂತೆ ಸೂಚಿಸಲಾಗಿತ್ತು. ಆದರೆ ಈ ರೀತಿ ಮನೆಯಲ್ಲಿ ಸ್ವಯಂ ನಿಗಾದಲ್ಲಿರುವವರು ಸರ್ಕಾರದ ಮಾನದಂಡ ಪಾಲಿಸದೆ, ಊರು ಸುತ್ತಾಡುತ್ತಿರುವುದರಿಂದ ಸರ್ಕಾರದ ಕಾರ್ಯಾಚರಣೆ ಬುಡಮೇಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇವರನ್ನು ಜನರಲ್ ಆಸ್ಪತ್ರೆಗೆ ದಾಖಲಿಸಿ ನಿಗಾವಹಿಸಲು ತೀರ್ಮಾನಿಸಲಾಗಿದೆ. ಇದು ಸಾಧ್ಯವಾದಲ್ಲಿ 208ಹಾಸಿಗೆಗಳ ಕೊಠಡಿಗಳನ್ನೂ ಇದಕ್ಕಾಗಿ ಬಳಸಿಕೊಳ್ಳಬಹುದಾಗಿದೆ.
ಶಾಸಕರ ಆಗ್ರಹ:
ಬದಿಯಡ್ಕ ಪಂಚಾಯಿತಿಯ ಉಕ್ಕಿನಡ್ಕದಲ್ಲಿರುವ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆಯ ಅಕಾಡಮಿಕ್ ಬ್ಲಾಕನ್ನು ಕೋವಿಡ್-19 ವೈರಸ್ ಬಾಧಿತರ ನಿಗಾ ಕೇಂದ್ರವನ್ನಾಗಿ ಮಾರ್ಪಡಿಸುವಂತೆ ಶಾಸಕ ಎನ್.ಎ ನೆಲ್ಲಿಕುನ್ನು ಆಗ್ರಹಿಸಿದ್ದಾರೆ. ಹೆಚ್ಚಿನ ವೈದ್ಯರನ್ನು ನೇಂಇಸುವುದರ ಜತೆಗೆ ಆಂಬುಲೆನ್ಸ್ ಒದಗಿಸಿಕೆಡಬೇಕಾಗಿದೆ. ವಿದೇಶದಿಂದ ಆಗಮಿಸಿರುವ ವೈರಸ್‍ಪೀಡಿತ ವ್ಯಕ್ತಿ, ಸರ್ಕಾರದ ಮಾನದಂಡ ಪಾಲಿಸದೆ, ಯಾವುದೇ ನಿಯಂತ್ರಣವಿಲ್ಲದೆ ಎಲ್ಲಾ ಕಡೆ ಸುತ್ತಾಡಿರುವ ಹಿನ್ನೆಲೆಯಲ್ಲಿ ಈ ಪ್ರದೇಶಕ್ಕೆ ಪರತ್ಯೇಕ ವಐದ್ಯಕೀಯ ತಂಡವನ್ನು ರವಾನಿಸುವಂತೆಯೂ ಆಗ್ರಹಿಸಿದ್ದಾರೆ.
ಜಿಲ್ಲೆಯ ಐಸೊಲೇಷನ್ ಆಸ್ಪತ್ರೆಗಳು:
ಕೊರೋನಾ ಹರಡುವಿಕೆಯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಐಸೋಲೇಷನ್ ಆಸ್ಪತ್ರೆಗಳಾಗಿ ಚಟುವಟಿಕೆ ನಡೆಸುವಕೇಂದ್ರಗಳು ಇಂತಿವೆ. ಕಾಸರಗೋಡು ಜನರಲ್ ಆಸ್ಪತ್ರೆ, ಕಾಞಂಗಾಡ್ ಜಿಲ್ಲಾ ಆಸ್ಪತ್ರೆ, ಕಾಞಂಗಾಡ್ ಮದರ್ಸ್ ಆಸ್ಪತ್ರೆ, ಪೆರಿಯಓಲ್ಡ್ ರಿವರ್ ಸೈಡ್ ಟ್ರಾನ್ಸಿಸ್ಟ್ ಸೆಂಟರ್ ಪೆರಿಯ, ಓಲ್ಡ್ ಸರ್ಜಿ ಕೇರ್, ಕಾಸರಗೋಡು ಅರಮನ ಆಸ್ಪತ್ರೆ, ಕೇರ್ವೆಲ್ ಆಸ್ಪತ್ರೆ, ಉಳಿಯತ್ತಡ್ಕ, ಚಿತ್ರ ಮೆಡಿಕಲ್ ಸೆಂಟರ್, ಬದಿಯಡ್ಕ ಸಮುದಾಯ ಆರೋಗ್ಯ ಕೇಂದ್ರ, ಮಂಜೇಶ್ವರ ಆಸ್ಪತ್ರೆ, ಮಂಗಲ್ಪಾಡಿ ಆಸ್ಪತ್ರೆ. ಜಿಲ್ಲೆಯಲ್ಲಿ ಇದುವರೆಗೆ 886ಮಂದಿಯನ್ನು ನಿಗದಲ್ಲಿರಿಸಲಾಗಿದ್ದು, ಇವರಲ್ಲಿ 825ಮಂದಿ ಮನೆಗಳಲ್ಲಿ ಹಾಗೂ ಉಳಿದವರು ಆಸ್ಪತ್ರೆಗಳಲ್ಲಿ ಕಳೆಯುತ್ತಿದ್ದಾರೆ. ಹೊಸದಾಗಿ 81ಮಂದಿಯ ಮಾದರಿಯನ್ನು ಲ್ಯಾಬ್‍ಗೆ ತಪಾಸಣೆಗಾಗಿ ಕಳುಹಿಸಲಾಗಿದೆ.
ಪ್ರಯೋಗಾಲಯ ಬಳಕೆಗೆ ಬಿಜೆಪಿ ಆಗ್ರಹ:
ಕೋವಿಡ್-19 ವೈರಸ್ ರೋಗ ಪರಿಶೋಧನೆಗಾಗಿ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಯೋಗಾಲಯವನ್ನು ಉಪಯೋಗಿಸಲು ಸರ್ಕಾರ ಮುಂದಾಗಬೇಕು ಎಂದು ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷ ಅಡ್ವ ಕೆ ಶ್ರೀಕಾಂತ್ ಆಗ್ರಹಿಸಿದ್ದಾರೆ.
ಕೋರೋನ ವೈರಸ್ ರೋಗದ ಪ್ರಾಥಮಿಕ ಪರೀಕ್ಷೆಗೆ ಅವಶ್ಯಕವಾದಂತಹ ಆರ್ ಟಿ ಪಿಸಿಆರ್ ಯಂತ್ರ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಲಭ್ಯವಿದೆ. ಪರೀಕ್ಷೆಗೆ ಬೇಕಾದ ಅತ್ಯಾಧುನಿಕ ಬಯೋ ಸೇಪ್ಟಿ ಕ್ಯಾಬಿನೆಟ್ ವಿಶ್ವವಿದ್ಯಾಲಯದಲ್ಲಿ ಇದೆ. ಇದನ್ನು ಫಲಪ್ರದವಾಗಿ ಉಪಯೋಗಿಸಲು ಬೇಕಾದ ಪೂರಕ ಕಾರ್ಯವನ್ನು ರಾಜ್ಯ ಸರ್ಕಾರ ಕೈಗೊಳ್ಳಬೇಕು. ಕೋರೋನ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ತುರ್ತಾಗಿ ವೈರಸ್ ಪರೀಕ್ಷೆಯ ಫಲ ಹೊರಬರಬೇಕಾಗಿದೆ. ಅನಾವಶ್ಯಕ ವಿಳಂಬವನ್ನು ತಪ್ಪಿಸಲು ಈ ನಿರ್ದೇಶನವನ್ನು ರಾಜ್ಯ ಸರ್ಕಾರದ ಮುಂದಿರಿಸಲಾಗಿದೆ. ಅಲ್ಲದೆ, ಕಾಸರಗೋಡು ಜಿಲ್ಲೆ ಸಂಪೂರ್ಣ ಸರ್ಕಾರದ ನಿಯಂತ್ರಣದಲ್ಲಿರುವ ಹಿನ್ನೆಲೆಯಲ್ಲಿ ಜನರಿಗೆಅಗತ್ಯವಿರುವ ಮದ್ದು ಹಾಗೂ ನಿತ್ಯೋಪಯೋಗಿ ವಸ್ತುಗಳು ಲಭ್ಯವಾಗದೆ ಚಡಪಡಿಸುತ್ತಿದ್ದಾರೆ. ಔಷಧ ಮತ್ತು ನಿತ್ಯೋಪಯೋಗಿ ಸಾಮಗ್ರಿ ಅರ್ಹರಿಗೆ ತಲುಪಿಸುವ ವ್ಯವಸ್ಥೆಯನ್ನು ಸರ್ಕಾರವೇ ವಹಿಸಿಕೊಳ್ಳಬೇಕು ಎಂದು ವಕೀಲ ಕೆ.ಶ್ರೀಕಾಂತ್ ಆಗ್ರಹಿಸಿದ್ದಾರೆ.


