ಕಾಸರಗೋಡು: ಕೋವಿಡ್-19 ವೈರಸ್‍ಗೆ ಕಾಸರಗೋಡಿನಲ್ಲಿ ಇದುವರೆಗೆ 41ಮಂದಿಗೆ ಕರೊನಾ ವೈರಸ್ ತಗುಲಿದ್ದು, ಇವರಲ್ಲಿ ಮೂರು ಮಂದಿ ಚಿಕಿತ್ಸೆಯ ನಂತರ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಒಟ್ಟು 38 ಮಂದಿ ಸೋಂಕು ಪೀಡಿತರು ಐಸೊಲೇಶನ್ ವಾರ್ಡಿನಲ್ಲಿ ಕಳೆಯುತ್ತಿದ್ದಾರೆ.
ಕರೊನಾ ಸೋಂಕು ಹರಡುವಿಕೆ ಸಂಬಂಧ ಜಿಲ್ಲೆಯಲ್ಲಿ ಹಲವು ಮಂದಿಯನ್ನು ನಿಗಾದಲ್ಲಿರಿಸಲಾಗಿದೆ. ಜಿಲ್ಲೆಯ ಇಬ್ಬರು ಶಾಸಕರನ್ನೂ ಒಳಗೊಂಡಂತೆ 886 ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ 61 ಮಂದಿ ಆಸ್ಪತ್ರೆಗಳಲ್ಲಿ, 825 ಮಂದಿ ಮನೆಗಳಲ್ಲೂ ನಿಗಾದಲ್ಲಿದ್ದಾರೆ. ನೂತನವಾಗಿ 81 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. ಕಾಸರಗೋಡಿನ ಕೂಡ್ಲು ನಿವಾಸಿಯೊಬ್ಬ ದುಬೈಯಿಂದ ಮಾರ್ಚ್ 12ರಂದು ಊರಿಗೆ ಆಗಮಿಸಿದ್ದು, ಯಾವುದೇ ನಿಯಂತ್ರಣವಿಲ್ಲದೆ ಹತ್ತು ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವುದರಿಂದ ವೈರಸ್ ಭಾರಿ ಪ್ರಮಾಣದಲ್ಲಿ ವ್ಯಾಪಿಸಲು ಕಾರಣವಾಗಿದೆ.


