ಬದಿಯಡ್ಕ: ಕುಂಬಳೆ ಸೀಮೆಯ ಬೇಳ ಗ್ರಾಮದ ಇತಿಹಾಸ ಪ್ರಸಿದ್ಧವಾದ ಕುಕ್ಕಂಕೂಡ್ಲು ಶ್ರಿಕಂಠಪಾಡಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನವು ಹಚ್ಚಹಸಿರಿನಿಂದ ಶೋಭಿಸುವ ಪ್ರಕೃತಿ ರಮಣೀಯವಾದ ಶಾಂತ ವಾತಾವರಣದಲ್ಲಿ ನೆಲೆಸಿದೆ. ಈ ದೇವಸ್ಥಾನವು ಸುಮಾರು 14ನೇ ಶತಮಾನದಲ್ಲಿ ಬೇಳವನ್ನು ಕೇಂದ್ರವಾಗಿಸಿಕೊಂಡು ಆಡಳಿತ ನಡೆಸುತ್ತಿದ್ದ ಮೂರನೇ ಜಯಸಿಂಹನ ಕಾಲದಲ್ಲಿ ನಿರ್ಮಾಣವಾಯಿತೆಂದು ಐತಿಹ್ಯವಿದೆ. ಹದಿನಾರು ದಿವಸಗಳ ಬಾಲಸುಬ್ರಹ್ಮಣ್ಯನನ್ನು ಜಯಸಿಂಹ ಮಹಾರಾಜರ ಸಹೋದರಿ ರಾಜ್ಞಿಯು ಸ್ವಪ್ನ ನಿರ್ದೇಶದಂತೆ ಪ್ರತಿಷ್ಠಾಪಿಸಿದಳೆಂದು ಪ್ರತೀತಿ.
ಈ ದೇವಾಲಯದ ಆಗ್ನೇಯದಲ್ಲಿ ನೆಲಮಟ್ಟದಲ್ಲಿ ಆಳವಾದ ವೃತ್ತಾಕಾರದ ಒಂದು ಗುಹೆಯಿದೆ. ಈಶಾನ್ಯದಲ್ಲಿ ವನಶಾಸ್ತಾರನೂ, ಹೊರಾಂಗಣದ ನೈಋತ್ಯ ದಿಕ್ಕಿನಲ್ಲಿ ಬಲಮುರಿ ಗಣಪತಿಯೂ, ವಾಯುವ್ಯದಲ್ಲಿ ಬ್ರಹ್ಮ ರಕ್ಷಸ್ಸು ಹಾಗೂ ಆಗ್ನೇಯದಲ್ಲಿ ರಕ್ತೇಶ್ವರಿಯು ಉಪದೇವತೆಗಳಾಗಿ ಈ ಕ್ಷೇತ್ರದಲ್ಲಿ ನೆಲೆಗೊಂಡಿರುತ್ತಾರೆ. ಅಲ್ಲದೆ ಕಿರುಷಷ್ಠಿಯ ಪುಣ್ಯದಿನದಂದು ಇಲ್ಲಿ ವಾರ್ಷಿಕ ಉತ್ಸವವು ವಿಜೃಂಭಣೆಯಿಂದ ನಡೆದುಕೊಂಡು ಬರುತ್ತಿದೆ. ಕಿರುಷಷ್ಠಿಯ ಮರುದಿನ ವಿಷ್ಣುಮೂರ್ತಿ ದೈವದ ಕೋಲವು ಜರಗಲಿರುವುದು.
ಹಿಂದಿನ ಕಾಲದಲ್ಲಿ ರಾಜ ವಂಶಸ್ಥರ ಆಡಳಿತದಲ್ಲಿದ್ದ ದೇವಾಲಯವು ಮುಂದೆ ಕುಕ್ಕಂಕೂಡ್ಲು ಕೊಳತ್ತಾಯ ಮನೆತನದವರಿಗೂ, ಅನಂತರ ಕೋಡಿಂಗಾರು ಗುತ್ತು ಮನೆತನಕ್ಕೂ ವರ್ಗಾವಣೆಯಾಗಿ ಪ್ರಸ್ತುತ ಸಮಿತಿಯ ಉಸ್ತುವಾರಿಯಲ್ಲಿ ನವೀಕರಣ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ಮಾ.20ರಿಂದ ಮಾ.28ರ ತನಕ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿವರ್ಯರ ನೇತೃತ್ವದಲ್ಲಿ ವಿವಿಧ ವೈದಿಕ, ಧಾರ್ಮಿಕ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರಗಲಿದೆ.
ಮಾ.25ರಂದು ಪ್ರಾತಃಕಾಲ 6.35ರಿಂದ 7.39ರ ಒಳಗೆ ಮೀನ ಲಗ್ನ ಸುಮುಹೂರ್ತದಲ್ಲಿ ಬಿಂಬ ಪ್ರತಿಷ್ಠೆ, ಮಾ.28ರಂದು ಶನಿವಾರ ಪೂರ್ವಾಹ್ನ 10.18ರ ವೃಷಭ ಲಗ್ನ ಸುಮುಹೂರ್ತದಲ್ಲಿ ಬ್ರಹ್ಮಕಲಶಾಭಿಷೇಕ ನಡೆಯಲಿದೆ.



