ಮಂಜೇಶ್ವರ: ಮಂಜೇಶ್ವರ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನಶ್ಚೇತನ ಕೇಂದ್ರದಲ್ಲಿ ಮಾ.8 ರಂದು ವಿಶ್ವ ಮಹಿಳಾ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಪೂರ್ವಾಹ್ನ 9.30ಕ್ಕೆ ಸ್ನೇಹಾಲಯ ಸಭಾಭವನದಲ್ಲಿ ಜರಗಿದ ಸಮಾರಂಭದಲ್ಲಿ ದಿನಾಚರಣೆಯನ್ನು ಹಿರಿಯ ಸಮಾಜ ಸೇವಕಿ ಬೀಫಾತಿಮ್ಮ ಉದ್ಘಾಟಿಸಿದರು. ಅವರು ಮಾತನಾಡಿ ಮಹಿಳೆಯರ ಹಕ್ಕುಗಳ ಬಗ್ಗೆ ಸವಿವರ ಮಾಹಿತಿಯಿತ್ತರು. ಹೆಣ್ಣು ನಾಲ್ಕು ಗೋಡೆಗಳ ನಡುವೆ ಸೀಮಿತವಾಗಬೇಕಾದ ಸರಕಲ್ಲ, ಅಂಥಾ ನಂಬಿಕೆಯಿಂದು ಬದಲಾಗಿದೆ. ಇಂದು ಎಲ್ಲ ಕ್ಷೇತ್ರಗಳಲ್ಲೂ ಪುರುಷನಿಗೆ ಸರಿಸಮಾನಾಗಿ ನಿಂತು ತನ್ನ ಸಾಮಥ್ರ್ಯದ ಅರಿವು ಮೂಡಿಸಿದ್ದಾಳೆ. ಆರೋಗ್ಯ, ಶಿಕ್ಷಣ, ಹಣಕಾಸು, ರಾಜಕೀಯ, ಉದ್ಯೋಗ, ಕುಟುಂಬ ಮೊದಲಾದ ವಲಯಗಳಲ್ಲಿ ಮಹಿಳೆಯರು ಗಳಿಸಿಕೊಂಡ ಮುನ್ನಡೆಯ ಸ್ಮರಣೆಯೇ ಈ ಅಂತಾರಾಷ್ಟ್ರೀಯ ಮಹಿಳಾ ದಿನವೆಂದು ವಿವರಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜಿನ ಉಪನ್ಯಾಸಕಿ ಲಕ್ಷ್ಮಿ .ಕೆ ಅವರು ಮಾತನಾಡಿ, ವಿಶ್ವದಾದ್ಯಂತ ಅಬಲೆಯರಾಗಿ ಬದುಕುತ್ತಿದ್ದ ಮಹಿಳೆಯರಿಗೆ, ಅವರ ಉನ್ನತಿಗೆ ಒಂದು ದಿನವೆಂಬ ಚಿಂತನೆಯಿಂದ ಈ ದಿನ ಹುಟ್ಟಿಕೊಂಡಿದೆ. ಈ ದಿನಕ್ಕೆ ಅನೇಕ ಐತಿಹಾಸಿಕ ಘಟನೆಗಳ ಹಿನ್ನೆಲೆಯಿದೆ. ಕೆಲಸದ ಸ್ಥಳಗಳಲ್ಲಿ ತಮ್ಮ ಸೌಕರ್ಯ, ಸೌಲಭ್ಯ, ಸುರಕ್ಷೆಗಾಗಿ ಮಹಿಳೆಯರು ನಡೆಸಿದ ಆಂದೋಲನಗಳ ಫಲವಾಗಿ ಮಹಿಳಾ ಸಬಲೀಕರಣ ಸಾಧ್ಯವಾಗಿದೆ. ಸತಿ ಸಹಗಮನ ಪದ್ದತಿಯಂಥ ದುರಾಚರಣೆಗಳು ಮಹಿಳೆಯರ ಅಸಮಾನತೆಯನ್ನು ಸಾರುತ್ತಿತ್ತು. ಆದರೆ, ಇಂದು ಮಹಿಳೆಯರು ಪುರುಷರಂತೆ ಸಕಲ ಕ್ಷೇತ್ರಗಳಲ್ಲೂ ಕೈಯ್ಯಾಡಿಸುತ್ತಿರುವುದು ಅಭಿಮಾನಾರ್ಹ ಬೆಳವಣಿಗೆ ಎಂದು ಅಭಿಪ್ರಾಯಪಟ್ಟರು.
ಸಮಾರಂಭದಲ್ಲಿ ಸ್ನೇಹಾಲಯದ ಟ್ರಸ್ಟಿ ಹಾಗೂ ಕಾರ್ಯದರ್ಶಿಯಾಗಿರುವ ಒಲಿವಿಯಾ ಕೆ. ಎಲ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಮಹಿಳಾ ದಿನದ ಶುಭ ಹಾರೈಸಿದರು. ಕಳಿಯೂರು ಸೈಂಟ್ ಜೋಸೆಫ್ ಉನ್ನತ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಪುಷ್ಪಾವತಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವ್ಯಕ್ತಿಗತ ಸುರಕ್ಷೆ ಹಾಗೂ ಆರೋಗ್ಯದ ಬಗ್ಗೆ ತರಗತಿ ನಡೆಸಿದರು. ಸ್ನೇಹಾಲಯ ಉದ್ಯೋಗಿ ಮೆಲ್ವಿನ್ ರೋಡಿಗ್ರಸ್ ವಂದಿಸಿದರು.
ಬಳಿಕ ಸ್ನೇಹಾಲಯ ನಿವಾಸಿಗಳು ಹಾಗೂ ಸಿಬ್ಬಂದಿಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ನಡೆದವು. ಮಹಿಳಾ ದಿನದ ಸ್ಮರಣೆಗಾಗಿ ಅಭಯ ಕೇಂದ್ರದ ಕೃಷಿ ಭೂಮಿಯಲ್ಲಿ ನಾಲ್ಕು ಮರಗಿಡಗಳನ್ನು ನೆಡಲಾಯಿತು. ರಾಷ್ಟ್ರಗೀತೆ ಬಳಿಕ ಕಾರ್ಯಕ್ರಮ ಮುಕ್ತಾಯವಾಯಿತು.


