ಕಾಸರಗೋಡು: ಕೋವಿಡ್ 19 ಸೋಂಕು ಹರಡುವಿಕೆ ಸಂಬಂಧ ಜಿಲ್ಲೆಯಲ್ಲಿ 409 ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ 9 ಮಂದಿ ಆಸ್ಪತ್ರೆಗಳಲ್ಲೂ, 400 ಮಂದಿ ಮನೆಗಳಲ್ಲೂ ನಿಗಾದಲ್ಲಿದ್ದಾರೆ. ನೂತನವಾಗಿ ಮೂವರನ್ನು ಆಸ್ಪತ್ರೆಯಲ್ಲಿ ನಿಗಾದಲ್ಲಿ ಇರಿಸಲಾಗಿದೆ. ನೂತನವಾಗಿ 25 ಮಂದಿಯ ಕ್ತರದ ಸ್ಯಾಂಪಲ್ ತಪಾಸಣೆಗೆ ರವಾನಿಸಲಾಗಿದೆ. 42 ಮಂದಿಯ ತಪಾಸಣೆಯ ಫಲ ಇನ್ನೂ ದೊರೆತಿಲ್ಲ. ಕೊರೋನಾ ಖಚಿತಗೊಂಡ ವ್ಯಕ್ತಿಯ ಸಂಪರ್ಕದಲ್ಲಿದ್ದ 42 ಮಂದಿಯನ್ನು ಪತ್ತೆ ಮಾಡಿ ಅವರನ್ನು ನಿಗಾದಲ್ಲಿ ಇರಿಸಲಾಗಿದೆ.
ಕೈತೊಳೆಯುವ ಕಾರ್ನರ್ ಉದ್ಘಾಟನೆ:
ಕಾಸರಗೋಡು ನೂತನ ಬಸ್ ನಿಲ್ದಾಣದಲ್ಲಿ ವೈಜ್ಞಾನಿಕ ರೀತಿ ಕೈತೊಳೆಯುವ ಕಾರ್ನರ್ ಸ್ಥಾಪಿಸಲಾಗಿದೆ. ಕರೋನಾ ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ರಾಜ್ಯ ಸರಕಾರದ ಆರೋಗ್ಯ ಇಲಾಖೆ ಜಾರಿಗೊಳಿಸುತ್ತಿರುವ ಬ್ರೇಕ್ ದಿ ಚೈನ್ ಅಭಿಯಾನದ ಸಲುವಾಗಿ ಕುಟುಂಬಶ್ರೀ ಜಿಲ್ಲಾ ಮಿಷನ್, ಸ್ನೇಹಿತಾ ಜೆಂಡರ್ ಸಹಾಯ ಕೇಂದ್ರ ಮತ್ತು ಕಾಸರಗೋಡು ನಗರಸಭೆ ಜಂಟಿ ವತಿಯಿಂದ ಈ ಕಾರ್ನರ್ ಸ್ಥಾಪಿಸಲಾಗಿದೆ.
ನಗರಸಭೆ ಅಧ್ಯಕ್ಷೆ ಬಿಫಾತಿಮಾ ಇಬ್ರಾಹಿಂ, ಡಿ.ಎಂ.ಸಿ.ಟಿ.ಟಿ.ಸುರೇಂದ್ರನ್ ಜಂಟಿಯಾಗಿ ಕಾರ್ನರ್ ಉದ್ಘಾಟಿಸಿದರು. ನಗರಸಭೆ ಕಾರ್ಯದರ್ಶಿ ಬಿಜು ಎಸ್., ಕಲ್ಯಾಣ ಸ್ಥಾಯೀ ಸಮಿತಿ ಅಧ್ಯಕ್ಷೆ ಫರ್ಹಾನಾ ಷಿಹಾಬುದ್ದೀನ್, ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷೆ ನೈಮೂನ್ನೀಸಾ, ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಮಿಸ್ರಿಯಾ ಹಮೀದ್, ವಾರ್ಡ್ ಸದಸ್ಯ ಸಿಯಾನಾ ಹನೀಫ್ ಉಪಸ್ಥಿತರಿದ್ದರು. ಕುಟುಂಬಶ್ರೀ ಜಿಲ್ಲಾಮಿಷನ್ ಡಿ.ಪಿ.ಎಂ. ಆರತಿ, ಸ್ನೇಹಿತಾ ಸಿಬ್ಬಂದಿ, ಸಿ.ಡಿಎಸ್. ಅಧ್ಯಕ್ಷೆ ಸಾಹಿರಾ ಮಹಮ್ಮದ್, ಲೆಕ್ಕಾಧಿಕಾರಿ ಸಜಿತಾ ಜಯರಾಜನ್ ಮೊದಲಾದವರು ಉಪಸ್ಥಿತರಿದ್ದರು.


