ಕಾಸರಗೋಡು: ವಿಶ್ವದಾದ್ಯಂತ ಮಾರಣಾಂತಿಕ ಕೊರೊನಾ ವ್ಯಾಪಿಸುತ್ತಿದ್ದು, ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ ಮತ್ತೆ ಆರು ಮಂದಿಗೆ ಕೊರೊನಾ ದೃಢೀಕರಿಸಲಾಗಿದೆ. ಇದರೊಂದಿಗೆ ಕಾಸರಗೋಡು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 8 ಕ್ಕೇರಿದೆ. ಕೊರೊನಾ ಪತ್ತೆಯಾದ ಕಾಸರಗೋಡಿನ ವ್ಯಕ್ತಿಯೋರ್ವ ಫುಟ್ಬಾಲ್ ಟೂರ್ನಮೆಂಟ್, ಕ್ಲಬ್‍ಗಳಿಗೆ ಹಾಗು ವಿವಾಹ ಸಮಾರಂಭಗಳು ಹಾಗು ಇತರೆಡೆಗಳಿಗೆ ಹೋಗಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ರೂಟ್ ಮ್ಯಾಪ್ ತಯಾರಿಸಲಾಗುವುದು.
ಕೇರಳದಲ್ಲಿ ಶುಕ್ರವಾರ ಒಟ್ಟು 12 ಮಂದಿಗೆ ಕೊರೊನಾ ದೃಢೀಕರಿಸಲಾಗಿದೆ. ಅದರಲ್ಲಿ ಕಾಸರಗೋಡು - 6, ಕೊಚ್ಚಿ - 5 ಮತ್ತು ಪಾಲ್ಘಾಟ್ - 1 ಎಂಬಂತೆ ಕೊರೊನಾ ಬಾ„ಸಿದೆ. ಇದರೊಂದಿಗೆ ಕೇರಳ ರಾಜ್ಯದಲ್ಲಿ ಈ ವರೆಗೆ 40 ಮಂದಿಗೆ ಕೊರೊನಾ ದೃಢೀಕರಿಸಲಾಗಿದೆ. ರಾಜ್ಯದಲ್ಲಿ ಒಟ್ಟು 44396 ಮಂದಿ ನಿಗಾದಲ್ಲಿದ್ದಾರೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿರುವನಂತಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕೊಚ್ಚಿಯಲ್ಲಿ ದೃಢೀಕರಿಸಲ್ಪಟ್ಟ ಐವರು ಬ್ರಿಟನ್ ಪ್ರವಾಸಿಗರಾಗಿದ್ದಾರೆ. ಒಟ್ಟು 13 ಮಂದಿ ಬ್ರಿಟನ್ ಪ್ರಜೆಗಳು ಕೇರಳದ ಪ್ರವಾಸಿ ಕೇಂದ್ರಗಳನ್ನು ವೀಕ್ಷಿಸಲು ಬಂದಿದ್ದರು. ಅವರಲ್ಲಿ ಐವರಿಗೆ ಕೊರೊನಾ ಪತ್ತೆಯಾಗಿದೆ. ಇವರನ್ನು ಕಳಮಶ್ಶೇರಿಯ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿದೆ. ಈ ಐವರು 60 ವರ್ಷಕ್ಕೆ ಮೇಲ್ಪಟ್ಟವರಾಗಿದ್ದಾರೆ. ಇವರಲ್ಲಿ ಒಬ್ಬರು ಮಹಿಳೆ ಸೇರಿದ್ದಾರೆ.
ಕೊರೊನಾ ನಿಯಂತ್ರಣಕ್ಕೆ ಸೇನೆಯನ್ನು ಬಳಸಿಕೊಳ್ಳುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ಹೆಲ್ಲಿಕಾಪ್ಟರ್‍ಗಳನ್ನು ಬಳಸಲಾಗುವುದು ಎಂದಿದ್ದಾರೆ.
ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಸರಕಾರಿ ಕಚೇರಿಗಳನ್ನು, ಪ್ರಾರ್ಥನಾಲಯಗಳನ್ನು ಒಂದು ವಾರ ಮುಚ್ಚಬೇಕೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಅಂಗಡಿಗಳನ್ನು ಬೆಳಗ್ಗೆ 11 ರಿಂದ ಸಂಜೆ 5 ಗಂಟೆಯ ವರೆಗೆ ಮಾತ್ರವೇ ತೆರೆಯಬೇಕೆಂದು ಮುಖ್ಯಮಂತ್ರಿ ಹೇಳಿದ್ದಾರೆ.


