ಕಾಸರಗೋಡು: ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿದ ಜನತಾ ಕಫ್ರ್ಯೂಗೆ ಕಾಸರಗೋಡಿನಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಕೆಎಸ್ಸಾರ್ಟಿಸಿ, ಖಾಸಗಿ ಬಸ್‍ಗಳು, ಟ್ಯಾಕ್ಸಿ, ಖಾಸಗಿ ವಾಹನಗಳೂ ರಸ್ತೆಗಿಳಿಯದೆ ಕಫ್ರ್ಯುನಲ್ಲಿ ಕೈಜೋಡಿಸಿತ್ತು. ಕಾಸರಗೋಡು ಜಿಲ್ಲಾದ್ಯಂತ ವ್ಯಾಪಾರಿಮುಂಗಟ್ಟು ಸಂಪೂರ್ಣ ಮುಚ್ಚಿಕೊಂಡಿತ್ತು. ಜನಸಂಚಾರವಿಲ್ಲದೆ ಎಲ್ಲೆಲ್ಲೂ ನೀರವ ಮೌನ ಆವರಿಸಿತ್ತು.
ರೈಲಿನಲ್ಲಿ ಆಗಮಿಸಿದ ಬೆರಳೆಣಿಕೆ ಪ್ರಯಾಣಿಕರು ಹಾಗೂ ತುರ್ತಾಗಿ ತೆರಳುವವರು ಮಾತ್ರ ಕಾಸರಗೋಡು ನಗರದಲ್ಲಿ ಕಂಡುಬಂದಿದ್ದರು. ಸದಾ ಜನರಿಂದ ತುಂಬಿಕೊಳ್ಳುತ್ತಿದ್ದ ಕಾಸರಗೋಡು ಹೊಸ ಬಸ್‍ನಿಲ್ದಾಣ, ಹಳೇ ಬಸ್ ನಿಲ್ದಾಣ, ಎಂ.ಜಿ ರಸ್ತೆ, ಮಾರ್ಕೆಟ್ ನಿರ್ಜನವಾಗಿತ್ತು. ಪೆಟ್ರೋಲ್ ಪಂಪುಗಳೂ ಮುಚ್ಚಿಕೊಂಡಿತ್ತು. ರಸ್ತೆಯಲ್ಲಿ ನಡೆದುಹೋಗುತ್ತಿದ್ದವರನ್ನೂ ಪೊಲೀಸರು ತಡೆದು ಅವರಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಎಸ್ಸೆಸೆಲ್ಸಿ, ಹೈಯರ್‍ಸೆಕೆಂಡರಿ ಶಾಲಾ ಹಾಗೂ ವಿಶ್ವ ವಿದ್ಯಾಲಯಗಳ ಪರೀಕ್ಷೆಗಳನ್ನು ಸರ್ಕಾರ ಮುಂದೂಡಿತ್ತು. ದೇವಾಲಯಗಳಿಗೆ ಭಕ್ತಾದಿಗಳನ್ನು ಬಾರದಂತೆ ತಿಳಿಸಲಾಗಿದ್ದು, ನಿತ್ಯಪೂಜೆಯೊಂದಿಗೆ ನೈಮಿತ್ತಿಕ ಕಾರ್ಯಕ್ರಮಗಳಷ್ಟೆ ನಡೆಯುತ್ತಿದೆ.
ಕೇರಳದಿಂದ ಕರ್ನಾಟಕಕ್ಕೆ ಯಾವುದೇ ವಾಹನಗಳೂ ತೆರಳದಂತೆ ನಾಕಾಬಂದಿ ಏರ್ಪಡಿಸಲಾಗಿತ್ತು. ದ್ವಿಚಕ್ರ ಸಹಿತ ಯಾವುದೇ ವಾಹನಗಳನ್ನೂ ಪೊಲೀಸರು ಕರ್ನಾಟಕದೊಳಗೆ ತೆರಳಲು ಬಿಡುತ್ತಿರಲಿಲ್ಲ. ಇದಕ್ಕಾಗಿ ಗಡಿ ಪ್ರದೇಶಗಳಲ್ಲಿ ಬಾರಿಕೇಡ್ ನಿರ್ಮಿಸಿ ತಡೆಯೊಡ್ಡಲಾಗಿತ್ತು.



