ಕಾಸರಗೋಡು: ಜೈವಿಕ ಬದುಕಿಗೆ ನಾಂದಿ ಹಾಡುವ ಮೂಲಕ ಬಂಜರು ಭೂಮಿಯನ್ನು ಹಸನಾಗಿಸಿ, ಸಮೃದ್ಧ ತರಕಾರಿ ಬೆಳೆಯ ಮೂಲಕ ಪಳ್ಳಿಕ್ಕರೆ ಗ್ರಾಮ ಪಂಚಾಯಿತಿ ಸ್ವಾವಲಂಬಿಯಾಗಿದ್ದು, ಸಮಾಜಕ್ಕೆ ಮಾದರಿಯಾಗುತ್ತಿದೆ. ಬಿರು ಬಿಸಿಲಿನ ನಡುವೆಯೂ ತರಕಾರಿ ಬೆಳೆಯ ಮೂಲಕ ಬಂಜರು ಭೂಮಿ ಹಸಿರಾಗಿಸಿ ನಳನಳಿಸುತ್ತಿದೆ.
ಕಳೆದ 4 ವರ್ಷಗಳ ಹಿಂದೆ ಬಂಜರು ಭೂಮಿಯನ್ನು ಕೃಷಿ ಯೋಗ್ಯವಾಗಿಸುವ ಯಜ್ಞಕ್ಕೆ ಗ್ರಾಮಪಂಚಾಯತ್ ತೊಡಗಿಸಿಕೊಂಡಿತ್ತು. 'ಜೈವಿಕ ಬದುಕು-ಹಸಿರು ಪಳ್ಳಿಕೆರೆ'ಇತ್ಯಾದಿ ಯೋಜನೆಗಳನ್ನುಅನುಷ್ಠಾನಕ್ಕೆ ತರುವ ಮೂಲಕ ತರಕಾರಿ ಬೆಳೆ, ಫಲ ನೀಡಬಲ್ಲ ಬೃಹತ್ ಮರವಾಗ ಬಲ್ಲ ಸಸಿಗಳ ವಿತರಣೆ, ಭತ್ತದ ಕೃಷಿ ವಿಸ್ತರಣೆ ಇತ್ಯಾದಿಗಳನ್ನು ಇಲ್ಲಿ ಆರಂಭಿಸಲಾಗಿತ್ತು. ಜೈವಿಕ ಬದುಕಿನೊಂದಿಗೆ ಆರೋಗ್ಯಯುತ ಆಹಾರ ಪಡೆಯುವ ಬಗ್ಗೆ ಜನಜಾಗೃತಿಮೂಡಿಸಿ, ಸಾರ್ವಜನಿಕರ ಆರೋಗ್ಯ ಖಚಿತಪಡಿಸುವ ಉದ್ದೇಶದಿಂದ ತೊಡಗಿಸಿಕೊಂಡ ಯೋಜನೆಗಳು ಇಲ್ಲಿ ಯಶಸ್ಸನ್ನು ಪಡೆದಿದೆ.
10 ಸೆಂಟ್ಸ್‍ಗಿಂತ ಅಧಿಕ ಜಾಗವಿರುವ ಪ್ರದೇಶಗಳಲ್ಲಿ ಕೃಷಿಗೆ ಸಬ್ಸಿಡಿ ನೀಡಿ ಬಂಜರು ಭೂಮಿ ರಹಿತ ಗ್ರಾಮ ಪಂಚಾಯಿತಿ ಆಗಿ ಪಳ್ಳಿಕ್ಕರೆಯನ್ನು ಮಾರ್ಪಡಿಸುವ ಯೋಜನೆಗೆ ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇರಿಸಲಾಗಿತ್ತು. ಸ್ಥಳೀಯ ಕೃಷಿಕರಿಗೆ ಈ ಸಾಲಿನಲ್ಲಿ ಗ್ರೋ ಬ್ಯಾಗ್‍ಗಳ ಜತೆಗೆ ವಿವಿಧ ತರಕಾರಿ ಸಸ್ಯಗಳನ್ನು ವಿತರಿಸಲಾಗಿತ್ತು. ಈ ಹಿಂದೆ ಕಲ್ಲಂಗಡಿ, ಹೋಕೋಸು ಇತ್ಯಾದಿಗಳನ್ನು ಬೆಳೆಯುವಲ್ಲಿ ಹೆಸರುವಾಸಿಯಾಗಿದ್ದ ಸ್ಥಳೀಯ ಕೃಷಿಕರಿಗೆ ಮತ್ತೆ ಅದೇ ಕೃಷಿಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಪೆÇ್ರೀತ್ಸಾಹ ನೀಡಲಾಗುತ್ತಿದೆ. ಮಧ್ಯಾವಧಿ ಬೆಳೆಯ ರೂಪದಲ್ಲಿ ಬಾಳೆ, ಅರಸಿನ, ಶುಂಠಿ, ಸುವರ್ಣಗೆಡ್ಡೆ ಸಹಿತ ಬೀಜಗಳನ್ನುಕೃಷಿಭವನ ಮೂಲಕ ವಿತರಣೆ ನಡೆಸಲಾಗಿದೆ. ಗುಂಪು ಕೃಷಿಕರಿಗೂ, ಸ್ವಯಂಸೇವಾ ಸಂಘಟನೆಗಳಿಗೂ ತರಕಾರಿ, ಭತ್ತದ ಕೃಷಿಗೆ ಬೇಕಾದ ಸಬ್ಸಿಡಿ ನೀಡಲಾಗುತ್ತಿದೆ. ಭತ್ತದ ಕೃಷಿಯ ಕೂಲಿ ವೆಚ್ಚ, ಉತ್ತು ಜಾಗ ಹಸನಾಗಿಸುವ, ಕುಮ್ಮಾಯ ಬೆರೆಸುವ ಇತ್ಯಾದಿ ಕಾಯಕಗಳಿಗೆ ಹೆಕ್ಟೇರ್ ಒಂದಕ್ಕೆ ತಲಾ 1700 ರೂ. ನೀಡಲಾಗುತ್ತಿದೆ. ವಿವಿಧ ಕೃಷಿ ವಿಭಾಗಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅಳವಡಿಸಿ 25 ಕೃಷಿ ಕೆರೆಗಳನ್ನು, 15 ತಾತ್ಕಾಲಿಕ ತಡೆಗೋಡೆ ನಿರ್ಮಿಸಲಾಗಿದೆ. ಇಕೋ ಶಾಪ್‍ಗಳ, ಕೃಷಿಭವನದ ಸ್ಟಾಲ್ ಗಳ ಮೂಲಕ ಕೃಷಿ ಉತ್ಪನ್ನಗಳನ್ನುನೇರವಾಗಿ ಕೃಷಿಕರಿಂದ ಗ್ರಾಹಕರಿಗೆ ನ್ಯಾಯ ಬೆಲೆಗೆ ತಲಪಿಸಲಾಗುತ್ತಿದೆ. ವಿವಿಧ ಜನಪರ ಯೋಜನೆಗಳ ಮೂಲಕ ತರಕಾರಿ ಕೃಷಿಯಲ್ಲಿ ಸ್ವಾವಲಂಬಿಯಾಗಬಹುದು ಎಂಬುದನ್ನು ಪಳ್ಳಿಕ್ಕರೆ ಗ್ರಾಮ ಪಂಚಾಯಿತಿ ಕ್ರಿಯಾತ್ಮಕವಾಗಿ ತೋರಿಸಿಕೊಟ್ಟಿದೆ.


