ಕಾಸರಗೋಡು: ವಿಶ್ವ ವ್ಯಾಪಿಯಾಗುತ್ತಿರುವ ಕೊರೊನಾ ವೈರಸ್ ಜಿಲ್ಲೆಯಲ್ಲಿ ತಡೆಗಟ್ಟಲು ಆರೋಗ್ಯ ಇಲಾಖೆ ನಡೆಸುತ್ತಿರುವ ಕಾರ್ಯಾಚರಣೆಗೆ ವಿವಿಧ ಇಲಾಖೆಗಳು, ಇಲ್ಲಿನ ಜನತೆ ಹಾಗೂ ಸಂಘ ಸಂಸ್ಥೆಗಳು ಕೈಗೊಂಡಿರುವ ಶ್ರಮ ಅಪಾರವಾಗಿದ್ದು, ಇದನ್ನು ಮತ್ತಷ್ಟು ಫಲಪ್ರದವಾಗಿಸಲು ಶ್ರಮವಹಿಸಬೇಕಾದ ಅಗತ್ಯವಿದೆ ಎಂದು ಕಂದಾಯ ಸಚಿವ ಇ.ಚಂದ್ರಶೇಖರನ್ ತಿಳಿಸಿದ್ದಾರೆ.
ಅವರು ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಸಭಂಗಣದಲ್ಲಿ ಶನಿವಾರ ಆಯೋಜಿಸಲಾದ ಕರೊನಾ ಅವಲೋಕನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೈರಸ್ ತಡೆಗಟ್ಟಲು ವಿವಿಧ ಇಲಾಖೆಗಳನ್ನು ಸಂಯೋಜಿಸಿಕೊಂಡು ಕಾರ್ಯಾಚರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಪರಿಸ್ಥಿತಿ ಗಂಭೀರವಾಗಿದ್ದರೂ, ಯಾರೂ ಆತಂಕಪಡಬೇಕಾದ ಅಗತ್ಯವಿಲ್ಲ. ಮುಂಜಾಗ್ರತಾ ಕ್ರಮ ಪಾಲಿಸುವುದರ ಜತೆಗೆ ಶುಚೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ವೈರಸ್ ವ್ಯಾಪಿಸದಂತೆ ಜಿಲ್ಲೆಯಲ್ಲಿ ನಿಯಂತ್ರಣಾಕಾರ್ಯ ತೃಪ್ತಿಕರವಾಗಿದ್ದು, ಪರಿಸ್ಥಿತಿ ಕೈಮೀರದಂತೆ ನೋಡಿಕೊಳ್ಳಬೇಕಾದ ಅನಿವಾರ್ಯತೆಯಿದೆ. ಇದಕ್ಕಾಗಿ ಸ್ಥಳೀಯಾಡಳಿತ ಸಂಸ್ಥೆಗಳು ಆದ್ಯತೆಯೊಂದಿಗೆ ಚಟುವಟಿಕೆ ನಡೆಸಬೇಕಾಗಿದೆ ಎಂದು ತಿಳಿಸಿದರು.
ಇನ್ನು ಮಾಸ್ಕ್ ವಿಚಾರದಲ್ಲಿ ಗೊಂದಲಪಡಬೇಕಾದ ಅಗತ್ಯವಿಲ್ಲ. ಕರೊನಾ ಬಾಧಿತರು, ಶಂಕಿತರು, ಪರಿಚಾರ ನಡೆಸುವವರು ಮಾತ್ರ ಮಾಸ್ಕ್ ಅಳವಡಿಸಿಕೊಂಡರೆ ಸಾಕು. ವ್ಯಾಪಕವಾಗಿ ಎಲ್ಲರೂ ಮಾಸ್ಕ್ ಖರೀದಿಗೆ ಮುಂದಾದಲ್ಲಿ ಅಗತ್ಯ ಸಂದರ್ಭ ಮಾಸ್ಕ್ ಲಭಿಸದ ಸ್ಥಿತಿ ನಿರ್ಮಾನವಾಗಲಿದೆ. ಪ್ರವಾಸೀ ಕೇಂದ್ರಗಳಿಗೆ ಯಾರೂ ತೆರಳದಂತೆ ನಿಯಂತ್ರಣ ಹೇರಲಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 249ಮಂದಿಯನ್ನು ನಿಗಾವಹಿಸಲಾಗುತ್ತಿದ್ದು, ಇವರಲ್ಲಿ 239ಮಂದಿ ಮನೆಗಳಲ್ಲಿ ಹಾಗೂ ಉಳಿದವರು ಆಸ್ಪತ್ರೆಗಳ ನಿಗಾದಲ್ಲಿದ್ದಾರೆ.
ಜಿಲ್ಲೆಯ ಶಾಸಕರಾದ ಎನ್.ಎ ನೆಲ್ಲಿಕುನ್ನು, ಕೆ. ಕುಞÂರಾಮನ್, ಎಂ. ರಾಜಗೋಪಾಲನ್, ಎಂ.ಸಿ ಕಮರುದ್ದೀನ್, ಜಿಪಂ ಅಧ್ಯಕ್ಷ ಎ.ಜಿ.ಸಿ ಬಶೀರ್, ಅಪರ ಜಿಲ್ಲಾಧಿಕಾರಿ ಅರುಣ್ ಕೆ. ವಿಜಯನ್, ಎಡಿಎಂ ದೇವಿದಾಸ್, ನಗರಸಭಾ ಅಧ್ಯಕ್ಷರಾದ ಪ್ರೊ. ಕೆ.ಪಿ ಜಯರಾಜನ್, ವಿ.ವಿ ರಮೇಶನ್, ಬೀಫಾತಿಮ್ಮ ಇಬ್ರಾಹಿಂ ಮುಂತಾದವರು ಉಪಸ್ಥಿತರಿದ್ದರು.


