ಕಾಸರಗೋಡು: ಕೋವಿಡ್-19'ವೈರಸ್ ಬಾಧಿಸಿರುವುದನ್ನು ಮರೆಮಾಚಿ, ಆರೋಗ್ಯ ಇಲಾಖೆ ನಿರ್ದೇಶ ಉಲ್ಲಂಘಿಸಿದ ಆರೋಪದಲ್ಲಿ ಕೊರೊನಾ ಸೋಂಕು ಪೀಡಿತ ಕೂಡ್ಲು ನಿವಾಸಿ ವಿರುದ್ಧ ನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ದುಬಾಯಿಂದ ಆಗಮಿಸಿದ ಈತ ವಿಮಾನ ನಿಲ್ದಾಣದಿಂದ ಆಗಮಿಸಿದ ಈತ ತೆರಳಿರುವ ಸ್ಥಳ ಹಾಗೂ ಸಂಪರ್ಕಿಸಿರುವ ವ್ಯಕ್ತಿಗಳ ಬಗ್ಗೆ ಮಾಹಿತಿ ಕಲೆಹಾಕಲು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಶ್ರಮಿಸುತ್ತಿದ್ದರೂ, ಸೂಕ್ತ ಮಾಹಿತಿ ನೀಡುತ್ತಿಲ್ಲ. ವಾಸ್ತವ ಮರೆಮಾಚಿ ಸುಳ್ಳು ಮಾಹಿತಿ ನೀಡುತ್ತಿರುವುದಾಗಿ ಜಿಲ್ಲಾಧಿಕಾರಿ ಡಾ. ಡಿ.ಸಜಿತ್‍ಬಾಬು ತಿಳಿಸಿದ್ದಾರೆ. ಈತ ಮಾ 12ರಂದು ಕೋಯಿಕ್ಕೋಡ್ ವಿಮಾನ ನಿಲ್ದಾಣದಿಂದ ಹೊರಟು, ಅಲ್ಲಿನ ವಸತಿಗೃಹವೊಂದರಲ್ಲಿ ಕೊಠಡಿ ಪಡೆದಿರುವುದು, ಕೆಲವೊಂದು ಹೋಟೆಲ್, ವ್ಯಾಪಾರಿ ಸಂಸ್ಥೆಗಳಿಗೆ ತೆರಳಿ, ಅಲ್ಲಿಂದ ರೈಲಿನಲ್ಲಿ ಕಾಸರಗೋಡಿಗೆ ಆಗಮಿಸಿರುವ ಬಗ್ಗೆ ಸ್ಪಷ್ಟ ರೂಟ್ ಮ್ಯಾಪ್ ಲಭ್ಯವಾಗಿದ್ದು, ಊರಿಗೆ ಬಂದ ನಂತರದ ಬಹುತೇಕ ಮಾಹಿತಿ ಲಭ್ಯವಾಗಿದ್ದರೂ, ಇನ್ನು ಕೆಲವೆಡೆ ತೆರಳಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಪ್ರಸಕ್ತ ವೈರಸ್‍ಪೀಡಿತ ವ್ಯಕ್ತಿ ಕಾಸರಗೋಡು ಜನರಲ್ ಆಸ್ಪತ್ರೆಯ ಐಸೊಲೇಶನ್ ವಾರ್ಡಿನಲ್ಲಿ ದಾಖಲಾಗಿದ್ದಾರೆ. ಜಿಲ್ಲೆಯಲ್ಲಿ ವೈರಸ್ ಬಾಧಿತರ ಸಂಖ್ಯೆ 14ಕ್ಕೆ ಏರಿಕೆಯಾಗಿದ್ದು, ಐಸೊಲೇಶನ್ ವಾರ್ಡ್ ನಲ್ಲಿ ಕಳೆಯುತ್ತಿರುವ ಇವರ ಸ್ಥಿತಿ ಸಾಮಾನ್ಯವಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.


