ಹಸು ಹಾಲು ಕೊಟ್ಟರೆ ಆದಕ್ಕೆ ಹುಳಿ ಹಿಂಡಿ ತನ್ನ ರುಚಿಗೆ ಬೇಕಾದ ಹಾಗೆ ಸಂಸ್ಕರಿಸಿ ಎಲ್ಲಾ ಆವಿಷ್ಕಾರಗಳೂ ನನ್ನದೇ ಎಂದು ಅಹಂಕಾರದಿಂದ ಬೀಗುವ ಮಾನವ ಪ್ರಕೃತಿಯ ಮುಂದೆ ಶೂನ್ಯ. ಸಕಲ ಜೀವರಾಶಿಗಳಲ್ಲಿ ಅತೀ ಬುದ್ಧಿವಂತಿಕೆ ಮತ್ತು ಅತೀ ಕ್ರೂರ ಪ್ರಾಣಿ ಇದ್ದರೆ ಅದು ಮಾನವ. ಫಲವತ್ತಾದ ಮಣ್ಣಿದೆ ಬೆಳೆ ಬೆಳೆದು ತಿನ್ನು ಎಂದರೆ ಕೊರೆದು ತಿವಿದು ತನಗೆ ತಾನೇ ಮೂರಡಿ ಆರಡಿ ತೋಡಿಕೊಳ್ಳುತ್ತಾನೆ. *ಪಂಚಭೂತಗಳು* ಇಲ್ಲೇ ಇವೆ ಅದರಲ್ಲೇ ಹುಟ್ಟಿ ಬೆಳೆದು ಅಲ್ಲೇ ವಿಲೀನವಾಗು ಎಂದರೆ ಅನ್ಯ ಗ್ರಹದ ಅನ್ವೇಷಣೆಯಲ್ಲಿದ್ದಾನೆ. ಜೀವನದಲ್ಲಿ ಹೇಗೆ ಸಾವು ಬಚ್ಚಿಟ್ಟುಕೊಂಡಿರುತ್ತದೋ...... ಅದೇ ರೀತಿ ಆರಂಭಕ್ಕೆ ಅಂತ್ಯವು ಇರಬಹುದಲ್ಲವೇ....?
ಜಗತ್ತಿನಲ್ಲಿ ಎಷ್ಟೇ ಧರ್ಮಗಳಿದ್ದರೂ ಆಧ್ಯಾತ್ಮಿಕತೆ ಒಂದೇ. ಅದಕ್ಕೆ ಧರ್ಮವಿಲ್ಲ......ಆಧ್ಯಾತ್ಮಿಕತೆಯು ಅನೇಕ ದೃಷ್ಟಿಕೋನಗಳಿಗೆ ಸ್ಥಳಾವಕಾಶವಿರುವ ಪರಿಕಲ್ಪನೆ. ಅದು ಮನುಷ್ಯನಿಗಿಂತ ದೊಡ್ಡದಾದ ಸಂಪರ್ಕದ ಪ್ರಜ್ಞೆಯನ್ನು ಒಳಗೊಂಡಿದೆ. ಆಧ್ಯಾತ್ಮಿಕತೆಯು ಒಂದು ಸಾಮಾನ್ಯವಾಗಿ ಜೀವನದಲ್ಲಿ ಅರ್ಥವನ್ನು ಹುಡುಕುವ ಸಾರ್ವತ್ರಿಕ ಮಾನವ ಅನುಭವ. ಆದರೆ ಇದನ್ನು ಮರೆತು ತೋರ್ಪಡಿಕೆಯ ಐಷಾರಾಮಿ ಜೀವನಕ್ಕೋಸ್ಕರ ತಾನು ಮೇಲು ನಾನು ಮೇಲು ಎಂದು ಕಿತ್ತಾಡಿಕೊಂಡು *ಲೌಕಿಕ* ಜೀವನದ ಮಂಪರಿನಲ್ಲಿ ನಿಜವಾದ ಜೀವನ ಮೌಲ್ಯವನ್ನು ಮರೆತಿದ್ದಾನೆ. ಪ್ರಕೃತಿಯು *ಪರಮಾತ್ಮನ* ಸೃಷ್ಟಿ, ಇಲ್ಲಿ ಎಲ್ಲವೂ ಇದೆ.ಜೀವರಾಶಿಗಳಿಗೆ ಬೇಕಾದ ಸಕಲ ಸೌಕರ್ಯಗಳು ಸೃಷ್ಟಿಕರ್ತನದ್ದೆ. ಆವಿಷ್ಕಾರದ ಹೆಸರಿಗೆ ಮಾತ್ರ ಮಾನವ. ಭೂಮಂಡಲದಲ್ಲಿ ಯಾವುದೇ ಸಂಶೋಧನೆ, ತಂತ್ರಜ್ಞಾನ ಇದ್ದರೂ ಅದರ ಮೂಲ ನೈಸರ್ಗಿಕ ಕಚ್ಚಾವಸ್ತು ಮತ್ತು ಪಂಚಭೂತಗಳೇ ಆಗಿವೆ ಹೊರತು ನನ್ನದು ನಾನು ಮಾಡಿದ್ದು ಎಂದು ಹೇಳಿಕೊಳ್ಳಲು ಏನು ಇಲ್ಲ.
ನಾಲ್ಕು ವೇದಗಳಾದ *ಋಗ್ವೇದ.* *ಯಜುರ್ವೇದ, ಸಾಮವೇದ,* *ಅಥರ್ವವೇದ* ಗಳನ್ನು ಅತೀ ಪುರಾತನ ಭಾಷೆಯಾದ ಸಂಸ್ಕ್ರತ ಭಾಷೆಯಲ್ಲಿ ಇಡೀ ಜೀವನೋಪಾದಿಯ ಸರ್ವ ಸಾರಾಂಶವನ್ನು ಋಷಿ ಮುನಿಗಳು ತಿಳಿಸಿದ್ದಾರೆ.ನಾಲ್ಕು ವೇದಗಳ ಉಪವೇದಗಳಾದ *1)ಆಯುರ್ವೇದವು* ಭೂ ಉತ್ಪನ್ನಗಳಿಂದ ಮಾನವ ದೇಹಕ್ಕೆ ಬೇಕಾದ ಔಷಧಿಯನ್ನು ತಯಾರಿಸುವ ವ್ಯೆದ್ಯಶಾಸ್ತ್ರವನ್ನು ಹೇಳುತ್ತದೆ. *2)ಧನುರ್ವೇದವು* ಶಸ್ತ್ರಾಸ್ತ್ರಗಳ ತಯಾರಾಗಿಸುವಿಕೆ, ಪ್ರಯೋಗ ವಿಷಯಗಳು, ರಾಜಕೀಯ ಧರ್ಮಶಾಸ್ತ್ರವನ್ನು ಹೇಳುತ್ತದೆ.
*3)ಗಾಂಧರ್ವವೇದವು* ಸಂಗೀತಶಾಸ್ತ್ರ ಹಾಡುವ ವಿಧಾನ ಮತ್ತು ರಾಗಗಳನ್ನು ವಿವರಿಸಿದೆ. *4)ಅರ್ಥವೇದವು* ಕಲಾ, ರಾಜಕೀಯ, ಆರ್ಥಿಕ, ಗಣಿತ,ವ್ಯವಸಾಯ,ಗೋರಕ್ಷಣೆ,ವ್ಯಾಪಾರಶಾಸ್ತ್ರವನ್ನು ವಿವರಿಸುತ್ತದೆ.
ಅಂದರೆ ಇಡೀ ವಿಶ್ವಕ್ಕೆ ಜೀವನೋಪಾಯದ ಅರಿವನ್ನು ಮೂಡಿಸಿದ್ದು ನಮ್ಮ ಪುರಾಣವಲ್ಲವೇ...? ಅತೀ ಪುರಾಣ ಭಾಷೆ ನಮ್ಮ ಮಣ್ಣಿನದಲ್ಲವೇ...? ಇಂದಿನ ವಿಜ್ಞಾನ ತಂತ್ರಜ್ಞಾನ ಆಧ್ಯಾತ್ಮಿಕದ ಮುಂದೆ ಏನನ್ನು ಸಾಧಿಸಿಲ್ಲ. ಎಲ್ಲವೂ ನನ್ನದೇ ನಾನು ಮಾಡಿದ್ದು ಎಂದು ಕೂಗುವ ನಾವುಗಳು ಒಂದು ಕಣ್ಣಿಗೆ ಕಾಣದ ರೋಗಾಣುವಿನ ಭಯದಲ್ಲಿ ತತ್ತರಿಸಿದ್ದೇವೆ, ಆವಿಷ್ಕಾರದಲ್ಲಿ ತೊಡಗಿರುವ ವಿಜ್ಞಾನಿಗಳು ದಿಗ್ಭ್ರಮೆಗೊಂಡಿದ್ದಾರೆ ದೇಶ ವಿದೇಶಗಳ ಸಂಪರ್ಕ ಕಡಿದುಹೋಗಿದೆ, ವ್ಯಾಪಾರ ವಹಿವಾಟು ಸ್ಥಗಿತ, ನಾವೇ ಬಲಿಷ್ಠರೆಂಬ ರಾಷ್ಟ್ರಗಳ ರಾಜಕಾರಣಿಗಳ ಅಹಂಕಾರ ನಿಂತುಹೋಗಿದೆ, ಇಡೀ ಜಗತ್ತನ್ನೇ ಸ್ಫೋಟಿಸಬಲ್ಲಷ್ಟು ಯುದ್ಧೋಪಕರಣಗಳಿದ್ದರು ಒಂದು ವೈರಸ್ ನ ಮುಂದೆ ಮಂಡಿಯೂರಿದೆ. ಕಪಟ ಬುದ್ಧಿ, ಘನತೆ, ಹಣದ ಅಮಲಿನಲ್ಲಿ ಮೇಲು ಕೀಳು, ಜಾತಿ, ಬೇಧ ಭಾವ ಅನಾಚಾರಗಳನ್ನು ಮಾಡುತ್ತಾ ದೇವರ ಮುಂದೆ ಪ್ರಾರ್ಥನೆ ಮಾಡಿದರೆ ಏನು ಫಲ....? ಇಂದು ಅಂತಹ ಆರಾಧನಾಲಯಗಳಲ್ಲೂ ಜ್ವರ ಕೆಮ್ಮು ಇದ್ದವನಿಗೆ ನಿಷಿದ್ಧ, ಜಾತ್ರಾ ಹಬ್ಬಗಳಿಗೆ ಜನ ಸೇರದಂತೆ ಸರ್ಕಾರಗಳ ಆದೇಶ. ಕ್ರೀಡಾ , ಕಲಾ ಸಾಂಸ್ಕøತಿಕ ಕ್ಷೇತ್ರಗಳಲ್ಲೂ ತಲ್ಲಣ. ಇದು ಕೇವಲ ಕಾಲಮಿತಿಯಲ್ಲಿದ್ದರೂ ಮಾನವನಿಗೊಂದು ಪಾಠವಲ್ಲವೇ....? ಮನುಷ್ಯ ಮತ್ತು ಪ್ರಕೃತಿಯ ಮಧ್ಯೆ ನಡೆಯುವ ಈ ಯುದ್ಧವನ್ನು ಮೂರನೇ ಮಹಾಯುದ್ಧ ಎಂದರು ತಪ್ಪಾಗಲಾರದು.
ಈ ಎಲ್ಲಾ ಆವಿಷ್ಕಾರ, ಸಂಶೋಧನೆ, ರಾಜಕೀಯ, ಆರ್ಥಿಕ , ವ್ಯೆದ್ಯಕೀಯ ಶಾಸ್ತ್ರಗಳ ಮೂಲ ನಮ್ಮ ಮಣ್ಣಿನ ವೇದಗಳೇ ಅದರ ಆಧಾರದಲ್ಲೇ ಪ್ರಪಂಚ ಮುಂದುವರೆದದ್ದು. ಎಲ್ಲಾ ಧರ್ಮದ ಪೂರ್ವಜರು ಹಿಂದೂಗಳೇ ಆಗಿದ್ದರು ಅಗ್ರವರ್ಣದವರ ಮೇಲು ಕೀಳು ಮನೋಭಾವದಿಂದ ಬೇರೆ ಧರ್ಮ ಹುಟ್ಟಿತೆಂದು ಕಥೆಗಳು ಹೇಳುತ್ತವೆ. ಏನು ವೇದಗಳಲ್ಲಿ ಜೀವನೋಪಾದಿಯನ್ನು ಹೇಳುತ್ತದೋ ಅದೇ ರೀತಿ ಪ್ರೀತಿ,ತ್ಯಾಗ,ಅಹಿಂಸೆ,ಧರ್ಮ, ಕರುಣೆಯನ್ನು ತೋರಿಸಿ *"ದೇಹೋದೇವಾಲಯ"* ಎಂದು ದೇಹಕ್ಕೆ ಮಿಗಿಲಾದ ದೇವಾಲಯವಿಲ್ಲ ಆತ್ಮಕ್ಕೆ ಮಿಗಿಲಾದ ದೇವರಿಲ್ಲ ಹೇಳುತ್ತದೆ.ಮನಸ್ಸಿನಿಂದ ದೇವರಿಗೆ ಹತ್ತಿರವಾಗಬೇಕೇ ಹೊರತು *ಹರಕೆ*, *ಕಾಣಿಕೆ* *ಆಡಂಬರ ಪೂಜೆ,* ಮಂತ್ರಗಳಿಂದಲ್ಲ. ಮೇಲು ಕೀಳು, ಜಾತಿ, ಬೇಧ ಭಾವ , ಅಸ್ಪ್ರಶ್ಯತೆಯನ್ನು ಹೋಗಲಾಡಿಸಲಾಗದೆ ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸದೆ ಸಮಾಜದ ಅಸಮತೋಲನವನ್ನು ಸರಿಪಡಿಸದೆ ಶ್ರೀಮಂತಿಕೆಯ ದರ್ಪದಲ್ಲಿ ಅದೆಷ್ಟೋ ಸಂಭಾವನೆ ಕೊಟ್ಟು ತಮ್ಮ ತಮ್ಮ ಹೆಸರು ಹಾಕಿಸಿ ದೇವಾಲಯ ಕಟ್ಟಿದರೆ ಏನು ಪ್ರಯೋಜನ. ಮಾನವ ಸೇವೆಯೇ ಮಾಧವ ಸೇವೆ ಎಂದು ಪಶು, ಪಕ್ಷಿ ,ಮೃಗ, ನೈಸರ್ಗಿಕ ಸಂಪತ್ತನ್ನು ಸಂರಕ್ಷಿಸಿ ಅಪೇಕ್ಷೆ ಪಡದೆ ಕೆಲಸವನ್ನು ಮಾಡು ಫಲ ನಾನು ಕೊಡುವೆ ಎಂಬ ಭಗವಂತನ ಮಾರ್ಗದಲ್ಲಿ ನಡೆಯಬೇಕು. ಅಲ್ಲದೆ ಆತ್ಮ ಬಿಟ್ಟು ಹೋದ ಮೇಲೆ, ರಕ್ತ ,ಮಾಂಸ ,ಕಫ, ಮಲ, ಮೂತ್ರದಿಂದ ಕೂಡಿದ *ಎಲುಬಿನ ಗೂಡನ್ನು* ನಾನು ನನ್ನದು ಎಂದು ಕೂಗಾಡಿದರೆ ಪ್ರಕೃತಿಯ ಸಹನೆಗೂ ಒಂದು ಮಿತಿಯಿಲ್ಲವೇ.....? ಪಾಶ್ಚಾತ್ಯರನ್ನು ಅನುಕರಣೆ ಮಾಡದೆ ಇನ್ನಾದರೂ ನಮ್ಮ ಮಣ್ಣಿನ ಪರಂಪರೆಯನ್ನು ಎತ್ತಿ ಹಿಡಿದು ಮುಂದಿನ ತಲೆಮಾರಿಗೆ ಈ ಭೂಮಿಯನ್ನು ಉಡುಗೊರೆಯನ್ನಾಗಿಸುವ.ಪ್ರಾರ್ಥನೆ ಸಾಕು ಪ್ರವೃತಿಯಲ್ಲಿ ತೊಡಗುವ.....
ಬರಹ: ವಿವಾನ್ ರಾಜೀವ್ ಅಡೂರ್.




