ಕಾಸರಗೋಡು: ಕೊರೋನಾ ಬಾಧೆ ಖಚಿತಗೊಡ ವ್ಯಕ್ತಿಯ ರೂಟ್ ಮ್ಯಾಪ್ ಸಿದ್ಧಗೊಳಿಸುವ ಪ್ರಕ್ರಿಯೆಯ ಹಿಂದೆ ಮಹತ್ತರವಾದ ಸಾರ್ವಜನಿಕ ಹಿತಾಸಕ್ತಿಯ ಉದ್ದೇಶವಿದೆ ಎಂದು ಪ್ರಭಾರ ಜಿಲ್ಲಾ ವೈದ್ಯಾಧಿಕಾರಿ ಎ.ವಿ.ರಾಮದಾಸ್ ತಿಳಿಸಿದರು.
ಕೊರೋನಾ ಬಾಧಿತ ಪ್ರದೇಶಗಳಿಂದ ಜಿಲ್ಲೆಗೆ ಆಗಮಿಸುವ ವ್ಯಕ್ತಿಯೊಬ್ಬರು ಹೆಲ್ಪ್ ಡೆಸ್ಕ್ ನೊಂದಿಗೆ ಸಂಪರ್ಕ ನಡೆಸಿ, ಅಲ್ಲಿ ನೀಡಲಾಗುವ ಆದೇಶಗಳ ಪ್ರಕಾರ ರೋಗಲಕ್ಷಣ ಹೊಂದಿರುವವರನ್ನು ಆಸ್ಪತ್ರೆಯ ವಿಶೇಷ ಘಟಕಕ್ಕೆ ದಾಖಲಿಸಲು ಅಗತ್ಯದ ವ್ಯವಸ್ಥೆ ನಡೆಸಲಾಗುವುದು. ಯಾ ಮನೆಗಳಲ್ಲಿ ನಿಗಾದಲ್ಲಿ ಇರಿಸಲಾಗುವುದು. ತಪಾಸಣೆಯ ವೇಳೆ ವ್ಯಕ್ತಿಗೆ ಸೋಂಕು ತಗುಲಿರುವುದು ಖಚಿತವಾದರೆ, ಆ ವ್ಯಕ್ತಿ ಯಾರೊಂದಿಗೆಲ್ಲ ಸಂಪರ್ಕ ನಡೆಸಿದ್ದಾರೆ ಎಂಬ ಆಹಿತಿಗಾಗಿ ರೂಟ್ ಮ್ಯಾಪ್ ಸಿದ್ಧಪಡಿಸಲಾಗುತ್ತದೆ. ಅವರು ಯಾವ ವಾಹನಗಳಲ್ಲಿ ಸಂಚಾರ ನಡೆಸಿದ್ದಾರೆ. ಆ ವಾಹನದಲ್ಲಿ ಇದ್ದ ಇತರರು ಯಾರು, ಯಾವೆಲ್ಲ ಪ್ರದೇಶಗಳಲ್ಲಿ ಈ ವ್ಯಕ್ತಿ ಯಾರನ್ನೆಲ್ಲ ಸಂಪರ್ಕಿಸಿದ್ದಾರೆ, ಹೀಗೆ ಎಲ್ಲರನ್ನೂ ಪತ್ತೆಮಾಡಿ ಅವರನ್ನು ತಪಾಸಣೆಗೊಳಪಡಿಸಿ, ಸೋಂಕು ಬಾಧೆ ಇತರ ಮಂದಿಗೆ ಹರಡದಂತೆ ವ್ಯವಸ್ಥೆ ಮಾಡಲಾಗುವುದು.
ಈ ಹಿನ್ನೆಲೆಯಲ್ಲಿ ಸೋಂಕು ಬಾಧಿತ ಪ್ರದೇಶಗಳಿಂದ ಊರಿಗೆ ಮರಳಿದವರು ಹೆಲ್ಪ್ ಡೆಸ್ಕ್ನ ಸಹಾಯ ಪಡೆಯಬೇಕು. ರಾಜ್ಯ ಸರಕಾರ, ಆರೋಗ್ಯ ಇಲಾಖೆ ನೀಡುವ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸಾರ್ವಜನಿಕ ವಾಹನಗಳಲ್ಲಿ ಆಸ್ಪತ್ರೆಗೆ ತೆರಳ ಕೂಡದು. ಆಸ್ಪತ್ರೆಯಲ್ಲಿ ಸ್ವಯಂ ಪ್ರೇರಣೆಯಿಂದ ತಪಾಸಣೆ ಗೊಳಪಡಬಾರದು. ಸಾರ್ವಜನಿಕ ಸಂಪರ್ಕ ನಡೆಸಲೇ ಬಾರದು. ಹೀಗೆ ಮಾಡಿದಾಗ ಮಾತ್ರ ಈ ಮಾರಕ ಸೋಂಕಿನಿಂದ ನಮ್ಮ ನಾಡು ಮುಕ್ತವಾಗಬಹುದು ಎಂದು ಪ್ರಭಾರ ಜಿಲ್ಲಾ ವೈದ್ಯಾಧಿಕಾರಿ ಎ.ವಿ.ರಾಮದಾಸ್ ತಿಳಿಸಿದರು.


