ಕಾಸರಗೋಡು: ಕೋವಿದ್ - 19 ವೈರಸ್ ರೋಗ ಪರಿಶೋಧನೆಗಾಗಿ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಯೋಗಾಲಯವನ್ನು ಉಪಯೋಗಿಸಬೇಕೆಂದು ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷ, ನ್ಯಾಯವಾದಿ ಕೆ.ಶ್ರೀಕಾಂತ್ ಆಗ್ರಹಿಸಿದ್ದಾರೆ.
ಕರೊನಾ ವೈರಸ್ ರೋಗದ ಪ್ರಾಥಮಿಕ ಪರೀಕ್ಷೆಗೆ ಅವಶ್ಯಕವಾದಂತಹ ಆರ್‍ಟಿ ಪಿಸಿಆರ್ ಯಂತ್ರ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಲಭ್ಯವಿದೆ. ಪರೀಕ್ಷೆಗೆ ಬೇಕಾದ ಅತ್ಯಾಧುನಿಕ ಬಯೋ ಸೇಪ್ಟಿ ಕ್ಯಾಬಿನೆಟ್ ವಿಶ್ವವಿದ್ಯಾಲಯದಲ್ಲಿ ಇದೆ. ಇದನ್ನು ಫಲಪ್ರದವಾಗಿ ಉಪಯೋಗಿಸಲು ಬೇಕಾದ ಪೂರಕ ಕಾರ್ಯವನ್ನು ರಾಜ್ಯ ಸರ್ಕಾರ ಕೈಗೊಳ್ಳಬೇಕೆಂದು ಬಿಜೆಪಿ ನಿರ್ದೇಶನ ನೀಡಿದೆ.
ಕರೊನಾ ರೋಗ ವ್ಯಾಪಕವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ತುರ್ತಾಗಿ ವೈರಸ್ ಪರೀಕ್ಷೆಯ ಫಲ ಹೊರಬರಬೇಕಾಗಿದೆ. ಅನಾವಶ್ಯಕ ವಿಳಂಬವನ್ನು ತಪ್ಪಿಸಲು ಈ ನಿರ್ದೇಶನವನ್ನು ರಾಜ್ಯ ಸರ್ಕಾರದ ಮುಂದೆ ಇಡಲಾಗಿದೆ ಎಂದು ನ್ಯಾಯವಾದಿ ಕೆ.ಶ್ರೀಕಾಂತ್ ಹೇಳಿದರು.
ಕಾಸರಗೋಡು ಜಿಲ್ಲೆಯ ಸರ್ಕಾರದ ನಿಯಂತ್ರಣದಲ್ಲಿರುವ ಈ ಸಂದರ್ಭದಲ್ಲಿ ಜನತೆ ಮದ್ದುಗಳು ಹಾಗು ನಿತ್ಯೋಪಯೋಗಿ ಸಾಮಗ್ರಿಗಳು ಸಿಗದೆ ಚಡಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮದ್ದುಗಳು ಮತ್ತು ನಿತ್ಯೋಪಯೋಗಿ ವಸ್ತುಗಳು ಅರ್ಹರಿಗೆ ಮುಟ್ಟಿಸುವ ವ್ಯವಸ್ಥೆಯನ್ನು ಕೂಡ ಸರ್ಕಾರ ಮಾಡಬೇಕೆಂದು ಅವರು ಆಗ್ರಹಿಸಿದರು.


