ಕಾಸರಗೋಡು: ಕರೊನಾ ಬಾಧೆಯಿಂದ ಜನತೆ ಮನೆ ಬಿಟ್ಟು ಹೊರಬಾರದ ಸ್ಥಿತಿ ನಿರ್ಮಾಣವಾಗಿದ್ದು, ಇದರಿಂದ ಖಾಸಗಿ ಬಸ್ ಉದ್ದಿಮೆ ಭಾರಿ ನಷ್ಟ ಅನುಭವಿಸಬೇಕಾಗುತ್ತಿದೆ. ಜನರಿಲ್ಲದೆ ವ್ಯಾಪಾರಿ ವಲಯವೂ ಸಂಕಷ್ಟ ಅನುಭವಿಸುತ್ತಿದೆ. ಪ್ರಯಾಣಿಕರ ಅಭಾವದಿಂದ ಬಸ್ ಸಂಚಾರ ಸ್ಥಗಿತಗೊಳಿಸಬೇಕಾದ ಸಂದಿಗ್ಧ ಪರಿಸ್ಥಿತಿ ಎದುರಾಗಿರುವುದಾಗಿ ಜಿಲ್ಲಾ ಖಾಸಗಿ ಬಸ್ ಆಪರೇಟರ್ಸ್ ಫೆಡರೇಶನ್ ಪದಾಧಿಕಾರಿಗಳು ತಿಳಿಸಿದ್ದಾರೆ.
2018ರಲ್ಲಿ ಕೇರಳವನ್ನು ಬಾಧಿಸಿದ ನೆರೆಹಾವಳಿ, ನಂತರದ ದಿನಗಳಲ್ಲಿ ಜನರನ್ನು ಮಕ್ಕಾಡೆ ಮಲಗಿಸಿರುವ ನಿಫಾ ವೈರಸ್, ಪ್ರಸಕ್ತ ಕರೊನಾ ವೈರಸ್ ಜನಜೀವನದ ಮೇಲೆ ಗಂಭೀರ ದುಷ್ಪರಿಣಾಮ ಬೀರಿದೆ. ಈ ಸಂಕಷ್ಟಗಳ ಮಧ್ಯೆ ಇಂಧನ ಬೆಲೆಯಲ್ಲೂ ಏರಿಕೆಯುಂಟಾಗಿರುವುದು ಖಾಸಗಿ ಬಸ್ ವಲಯವನ್ನು ಸಂಪೂರ್ಣ ನೆಲಕಚ್ಚುವಂತೆ ಮಾಡಿದೆ. ಪ್ರತಿ ದಿನ ನಷ್ಟದಲ್ಲಿ ಮುಂದುವರಿಯುವುದು ಅಸಾಧ್ಯವಾದ ಕಾರಣ, ಖಾಸಗಿ ಬಸ್ ಸಂಚಾರ ನಿಲುಗಡೆಗೊಳಿಸುವುದು ಅನಿವಾರ್ಯವಾಗಿದ್ದು, ಈ ಬಗ್ಗೆ ಶೀಘ್ರ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಂಘದ ಅಧ್ಯಕ್ಷ ಗಿರೀಶ್ ಕೆ. ಹೇಳಿಕೆಯಲ್ಲಿ ತಿಳಿಸಿದ್ದಾರೆ.


