ಮುಳ್ಳೇರಿಯ: ಜಿಲ್ಲೆಯ ಅತಿ ಹಿಂದುಳಿದ, ಗಡಿ ಗ್ರಾಮ ಪಂಚಾಯತಿಗಳಲ್ಲೊಂದಾದ ದೇಲಂಪಾಡಿಯ ಹಳ್ಳಿಯೊಂದು ಕರೊನಾ ಹಿನ್ನೆಲೆಯ ನಿರ್ಬಂಧದ ಕಾರಣ ಸಂಪೂರ್ಣ ದ್ವೀಪದಂತೆ ಮಾರ್ಪಟ್ಟಿದ್ದು, ಹಳ್ಳಿಯ ನೂರಾರು ಜನರು ಅತಂತ್ರರಾಗುವ ಭೀತಿ ಎದುರಾಗಿದೆ.
ದೇಲಂಪಾಡಿ ಗ್ರಾಮ ಪಂಚಾಯತಿಯ ಹಲವು ಹಳ್ಳಿಗಳು ಬಡ ವರ್ಗದ ಜನರ ಪ್ರದೇಶವಾಗಿದ್ದು ದೈನಂದಿನ ಅಗತ್ಯಗಳನ್ನು ಕೂಲಿ ಕೆಲಸದಿಂದ ಲಭಿಸುವ ದಿನವೇತನ ಆಧಾರದಲ್ಲಿ ಪಡೆದು ಜೀವನ ಸಾಗಿಸುವವರಾಗಿದ್ದಾರೆ. ದೇಲಂಪಾಡಿ ಗ್ರಾ.ಪಂ. ವ್ಯಾಪ್ತಿಯು ಕರ್ನಾಟಕದ ಪುತ್ತೂರು ಹಾಗೂ ಸುಳ್ಯ ತಾಲೂಕುಗಳೊಂದಿಗೆ ಗಡಿಗಳನ್ನು ಹೊಂದಿರುವ ಪ್ರದೇಶವೂ ಆಗಿದೆ. ದೇಲಂಪಾಡಿ, ಊಜಂಪಾಡಿ, ಮಯ್ಯಾಳ, ಸಾಲತ್ತಡ್ಕ, ಹಿದಾಯತ್ ನಗರ, ಶಾಂತಿಮಲೆ, ಮುನ್ಚಿಕ್ಕಾನ,ನೂಜಿಬೆಟ್ಟು, ಅಡ್ಡಂತ್ತಡ್ಕ ಮೊದಲಾದ ಪ್ರದೇಶಗಳು ತಮ್ಮ ದೈನಂದಿನ ಚಟುವಟಿಕೆ, ದಿನಸಿವಸ್ತು, ಔಷಧಿ ಮೊದಲಾದ ಪ್ರಾಥಮಿಕ ಅಗತ್ಯಗಳಿಗೆ ಈಶ್ವರಮಂಗಲ, ಜಾಲ್ಸೂರು, ಸುಳ್ಯಗಳನ್ನು ಆಶ್ರಯಿಸುತ್ತವೆ. ಈ ಪ್ರದೇಶವಾಸಿಗಳು ಮನೆಯಿಂದ ಹೊರ ಕಾಲಿಸುವುದೇ ಕರ್ನಾಟಕದ ರಸ್ತೆಗಳಿಗೆ ಎಂದರೂ ತಪ್ಪಾಗಲಾರದು.
ಆದರೆ ಕರೊನಾ ನಿಯಂತ್ರಣದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಅಂತರ್ ರಾಜ್ಯ ಗಡಿಗಳ ರಸ್ತೆಯನ್ನು ಹೊಂಡಗಳನ್ನು ನಿರ್ಮಿಸಿ ಮುಚ್ಚಿರುವುದರಿಂದ ಈ ಪ್ರದೇಶದ ಜನಜೀವನ ಅಸ್ತವ್ಯಸ್ತಗೊಂಡು ದ್ವೀಪದಲ್ಲಿ ವಾಸಿಸುವ ಸ್ಥಿತಿ ನಿರ್ಮಾಣವಾಗಿರುವುದಾಗಿ ತಿಳಿದುಬಂದಿದೆ. ತಮ್ಮ ದಿನನಿತ್ಯದ ಅಗತ್ಯಗಳನ್ನು ಹೇಗೆ ಪೂರೈಸುವುದೆಂಬ ಜಟಿಲ ಸವಾಲುಗಳನ್ನು ನೂಜಿಬೆಟ್ಟು, ಅಡ್ಡಂತ್ತಡ್ಕ, ಕೊಂಬೆಟ್ಟು ಮೊದಲಾದ ಹಳ್ಳಿಗಳ ಗ್ರಾಮಸ್ಥರು ಅವಲತ್ತುಕೊಂಡಿದ್ದಾರೆ. ನೂಜಿಬೆಟ್ಟು-ಮಡ್ಯಲಮಜಲು, ದೇಲಂಪಾಡಿ-ಬನಾರಿ, ದೇವರಗುಂಡ-ಜಾಲ್ಸೂರು ರಸ್ತೆಗಳು ಸಂಪೂರ್ಣ ಹೊಂಡಗಳನ್ನು ತೋಡಿ ಮುಚ್ಚಲಾಗಿರುವುದರಿಂದ ಗ್ರಾಮೀಣ ಜನರು ಸಂಕಷ್ಟಕ್ಕೊಳಗಾಗಿದ್ದಾರೆ.


