ಕಾಸರಗೋಡು: ತನ್ನ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಳ್ಳಬೇಕು ಎಂಬ ಕಾರಣಕ್ಕಾಗಿ ಸಂಗ್ರಹಿಸಿಕೊಂಡು ಬಂದಿದ್ದ ಮೊಬಲಗನ್ನು ಮುಖ್ಯಮಂತ್ರಿ ಅವರ ದುರಂತ ನಿವಾರಣೆ ನಿಧಿಗೆ ಹಸ್ತಾಂತರಿಸುವ ಮೂಲಕ ಬಾಲಕನೊಬ್ಬ ಮಾದರಿಯಾಗಿದ್ದಾನೆ.
ವಿದ್ಯಾನಗರದ ಚಿನ್ಮಯಾ ವಿದ್ಯಾಲಯದ 5ನೇ ತರಗತಿ ವಿದ್ಯಾರ್ಥಿ ಶ್ರಾವಣ್ ಎ. ಸುಮೇಶ್ ತನ್ನ ಹತ್ತನೇ ವರ್ಷದ ಹುಟ್ಟುಹಬ್ಬ ಆಚರಣೆಗಾಗಿ ಸಂಗ್ರಹಿಸಿದ್ದ 2201 ರೂ.ವನ್ನು ಈ ರೀತಿ ದೇಣಿಗೆಯಾಗಿ ನೀಡಿದ್ದಾನೆ. ವಿದ್ಯಾನಗರದ ಜಿಲ್ಲಾಧಿಕಾರಿ ಅವರ ಕ್ಯಾಂಪ್ ಹೌಸ್ ಬಳಿಯ ನಿವಾಸಿ ಡಿ.ಸುಮೇಶ್-ಎಂ.ಕೆ.ಅಂಬಿಳಿ ದಂಪತಿ ಯ ಏಕೈಕ ಪುತ್ರ ಶ್ರಾವಣ್. ಕ್ಯಾಂಪ್ ಹೌಸ್ ಗೆ ತೆರಳಿದ ಬಾಲಕ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರಿಗೆ ಮೊಬಲಗನ್ನು ಹಸ್ತಾಂತರಿಸಿದ್ದಾನೆ. ಕೋವಿಡ್ ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮನವಿ ಮೇರೆಗೆ ದೇಣಿಗೆ ನೀಡುತ್ತಿರುವವರಲ್ಲಿ ಮಕ್ಕಳು ಸಹ ಸೇರಿರುವ ವಿಚಾರ ತಿಳಿದು ಸುಮೇಶ್ ಈ ನಿರ್ಧಾರ ಕೈಗೊಂಡಿದ್ದಾನೆ ಎಂದು ತಂದೆ ಎ. ಸುಮೇಶ್ ತಿಳಿಸಿದರು.


