ಮಂಜೇಶ್ವರ: ಕೋವಿಡ್ -19 ರ ನಿಯಂತ್ರಣಕ್ಕೆ ಸರಕಾರ ಲಾಕ್ ಡೌನ್ ಘೋಷಿಸಿದ ಬಳಿಕ ಕಾಸರಗೋಡು ಜನತೆ ಅಗತ್ಯದ ತುರ್ತು ಚಿಕಿತ್ಸೆಯಿಲ್ಲದೇ ಪರದಾಡುತ್ತಿರುವಾಗ ಜೀವರಕ್ಷಕ ಔಷಧಿಗಳನ್ನು ಪ್ರತಿನಿತ್ಯ ಮಂಗಳೂರಿನಿಂದ ಖರೀದಿಸಿ ರೋಗಿಗಳಿಗೆ ತಲುಪಿಸುವ ಕೆಲಸದಲ್ಲಿ ಬ್ಯುಸಿಯಾಗಿರುವ ಕಾಸರಗೋಡು ಜಿ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಕಾಸರಗೋಡಿನ ಹೆಚ್ಚಿನ ಜನತೆ ಚಿಕಿತ್ಸೆಗಾಗಿ ಮಂಗಳೂರನ್ನೇ ಆಶ್ರಯಿಸುವವರಾಗಿದ್ದು, ಲಾಕ್ ಡೌನ್ ಬಳಿಕ ಕಾಸರಗೋಡಿನ ಜನತೆಗೆ ಪ್ರವೇಶ ನಿರಾಕರಿಸಿದ ದ.ಕ.ಜಿಲ್ಲಾಡಳಿತವು ಎಲ್ಲಾ ಗಡಿಗಳನ್ನು ಮಣ್ಣು ಹಾಕಿ ಮುಚ್ಚಿ ಅಮಾನವೀಯತೆ ಮೆರೆದ ಪರಿಣಾಮ ಚಿಕಿತ್ಸೆ ದೊರಕದೆ 13ಕ್ಕೂ ಮಿಕ್ಕಿದ ಮಂದಿ ಮೃತಪಟ್ಟಾಗ ಮೊದಲು ಸುಪ್ರಿಂ ಕೋರ್ಟಿನ ಮೆಟ್ಟಲೇರಿದವರು ಇದೇ ಹರ್ಷಾದ್ ವರ್ಕಾಡಿ. ಇದರ ಜೊತೆಗೆ ಕಾಸರಗೋಡಿನ ಅದೆಷ್ಟೋ ರೋಗಿಗಳಿಗೆ ಕಾಸರಗೋಡಿನಲ್ಲಿ ದೊರಕದೇ ಇರುವ ಔಷಧಿಗಳನ್ನು ಮಂಗಳೂರಿನಿಂದ ಖರೀದಿಸಿ ಕಾಸರಗೋಡು ಜಿಲ್ಲೆಗೆ ತಲುಪಿಸುವ ಕಾಯಕಕ್ಕಿಳಿದಿರುವ ಇವರು ಈಗಾಗಲೇ 500ಕ್ಕೂ ಮಿಕ್ಕಿದ ಮಂದಿಗೆ ಔಷಧಿ ಲಭಿಸುವಂತೆ ಮಾಡಿ ಸ್ತುತ್ಯರ್ಹ ಸೇವೆ ಸಲ್ಲಿಸುತ್ತಿದ್ದಾರೆ. ಕಾಸರಗೋಡು ಜಿ.ಪಂ. ಜಿಲ್ಲೆಯಲ್ಲಿ ಔಷಧಿ ವಿತರಣೆ ನಡೆಸುತ್ತಿದ್ದು, ಇದಕ್ಕೆ ಸಾರಥ್ಯ ನೀಡುತ್ತಿರುವರು.
ಮಂಗಳೂರಿನಿಂದ ತಲಪಾಡಿ ಗಡಿಗೆ ತಲುಪುವ ವಿಭಿನ್ನ ಔಷಧಿಯನ್ನು ಗಡಿಯಿಂದ ಪ್ರತಿನಿತ್ಯ ಇವರು ಸ್ವೀಕರಿಸುತ್ತಿದ್ದು ತಕ್ಷಣವೇ ಅದರ ವಿತರಣೆಯೂ ನಡೆಯುತ್ತವೆ. ಇದಕ್ಕಾಗಿ ಪ್ರತಿ ದಿನವೂ ಸಾಯಂಕಾಲ ಇವರು ತಲಪಾಡಿ ಗಡಿಯಲ್ಲಿ ಹಾಜರಾಗುತ್ತಾರೆ . ವಾಟ್ಸಪ್ ಮೂಲಕ ರೋಗಿಗಳು ತಮಗೆ ಬೇಕಾದ ಔಷಧಿಯ ಮಾಹಿತಿಯನ್ನು ರವಾನಿಸುತ್ತಿದ್ದು, ಇದನ್ನು ಹರ್ಷಾದ್ ವರ್ಕಾಡಿಯವರು ಮಂಗಳೂರಿನ ಮೆಡಿಕಲ್ ಗಳಿಗೆ ರವಾನಿಸುತ್ತಾರೆ. ಪ್ರತಿದಿನ ಸಂಜೆ ವಿವಿಧ ಸಂಘಸಂಸ್ಥೆಯವರು, ಗೆಳೆಯರು, ಆಸ್ಪತ್ರೆಯ ಸಿಬ್ಬಂದಿಗಳು ಮಂಗಳೂರಿನಿಂದ ತಲಪಾಡಿ ಗಡಿಗೆ ಔಷಧಿ ತಲಪಿಸುತ್ತಾರೆ. ಹರ್ಷಾದ್ ವರ್ಕಾಡಿಯವರು ಔಷಧಿಯನ್ನು ಸ್ವೀಕರಿಸಿ ಆಯಾ ರೋಗಿಗಳಿಗೆ ಇದನ್ನು ತಲುಪಿಸುತ್ತಾರೆ. ಔಷಧಿ ವಿತರಣೆಯ ಈ ಮಹಾ ಸೇವೆಗೆ ಜಿ.ಪಂ.ಸಿಬ್ಬಂದಿಗಳೂ, ಪೆÇಲೀಸ್ ಇಲಾಖೆ, ಆರೋಗ್ಯ ಇಲಾಖೆ ಜತೆಗೂಡುತ್ತಾರೆ. ಚಿಕಿತ್ಸೆ ದೊರಕದ ರೋಗಿಗಳಿಗೆ ತಮಗೆ ಬೇಕಾದ ಔಷಧಿ ದೊರೆಕುವುದೇ ಮಹಾಭಾಗ್ಯ. ಲಾಕ್ ಡೌನ್ ಸಂದಿಗ್ದಾವಸ್ಥೆಯಲ್ಲಿ ಜೀವರಕ್ಷಕ ಔಷಧಿಗಳನ್ನು ಯಥಾ ಸಮಯದಲ್ಲಿ ತಲುಪಿ ಸುವ ಮೂಲಕ ಮಾದರಿ ಜನಪ್ರತಿನಿಧಿಯಾಗಿ ಜನಾನುರಾಗಿಯಾಗಿದ್ದಾರೆ.
ಔಷಧಿ ಅಗತ್ಯವಿರುವವರು ಇವರ 9447287098 ನಂಬ್ರದ ವಾಟ್ಸಪ್ ಗೆ ಔಷಧಿ ಚೀಟಿಯನ್ನು ಕಳುಹಿಸಬಹುದಾಗಿ ಹರ್ಷಾದ್ ವರ್ಕಾಡಿ ಮುಕ್ತ ಮನಸ್ಸಿನಲ್ಲಿ ಪ್ರತಿಕ್ರಿಯಿಸಿದ್ದಾರೆ.


