ಕಾಸರಗೋಡು: ಬೆಲೆಕುಸಿತದಿಂದ ಕಂಗೆಟ್ಟಿದ್ದ ನೇಂದ್ರಬಾಳೆ ಕೃಷಿಕರ ಮುಖದಲ್ಲಿ ಮಂದಹಾಸಮೂಡಲು ಆರಂಭಗೊಂಡಿದೆ. ನೇಂದ್ರಬಾಳೆ ಧಾರಣೆ ಏಕಾಏಕ ಹೆಚ್ಚಳಗೊಂಡಿರುವುದು ಈ ಸಂತಸಕ್ಕೆ ಕಾರಣವಾಗಿದೆ. ಕಿಲೋ ಒಂದಕ್ಕೆ 10ರಿಂದ 14 ರೂ.ಗೆ ಮಾರಾಟಮಾಡಲಾಗಿದ್ದ ನೇಂದ್ರಬಾಳೆಕಾಯಿ, ಮಂಗಳವಾರ ಕಿಲೋಗೆ 32ರಿಂದ 35ರೂ.ನಂತೆ ಕೃಷಿಕರು ಮಾರಾಟ ಮಾಡಿದ್ದಾರೆ.
ನೇಂದ್ರಬಾಳೆ ಧಾರಣೆ ಕುಸಿಯುತ್ತಿರುವುದನ್ನು ಮನಗಂಡ ರಾಜ್ಯ ತೋಟಗಾರಿಕಾ ಇಲಾಖೆ, ಕೃಷಿಕರಿಂದ ಕಿಲೋ ಒಂದಕ್ಕೆ 22ರೂ.ನಂತೆ ಖರೀದಿಸಿತ್ತು. ಈ ಮಧ್ಯೆ ಕೋವಿಡ್-19 ಬಾಧಿಸಿ ಲಾಕ್‍ಡೌನ್ ಘೋಷಣೆಯಾದ ಹಿನ್ನೆಲೆಯಲ್ಲಿ ಅಂತಾರಾಜ್ಯ ಗಡಿ ಬಂದ್ ಆಗುತ್ತಿದ್ದಂತೆ ಇತರ ರಾಜ್ಯಗಳಿಂದ ಆಗಮಿಸುತ್ತಿದ್ದ ನೇಂದ್ರಬಾಳೆಗೂ ತಡೆಯುಂಟಾಗಿದ್ದು, ನೇಂದ್ರಬಾಳೆಗೆ ಬೇಡಿಗೆ ಹೆಚ್ಚಲು ಕಾರಣವಾಗಿತ್ತು. ಇದೇ ಸ್ಥಿತಿ ಮುಂದುವರಿದರೆ ನೇಂದ್ರಬಾಳೆಕಾಯಿಗೆ ಕಿಲೋಗೆ 40 ರೂ. ವರೆಗೂ ಧಾರಣೆ ಲಭ್ಯವಾಗುವ ಸಾಧ್ಯತೆಯಿರುವುದಾಗಿ ಕೃಷಿಕರು ಅಭಿಪ್ರಾಐಪಡುತ್ತಾರೆ. ತಮಿಳ್ನಾಡು, ಕರ್ನಾಟಕ ಸಹಿತ ಇತರ ರಾಜ್ಯಗಳಿಂದ ಕೇರಳಕ್ಕೆ ನೇಂದ್ರಬಾಳೆ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆಯಾಗುತ್ತಿದ್ದಾಗ ನೇಂದ್ರಬಾಳೆಹಣ್ಣಿದ ಧಾರಣೆ ಕಿಲೋಗೆ 20ರೂ.ಗೂ ಕೆಳಕ್ಕೆ ಕುಸಿದಿತ್ತು. ಪ್ರಸಕ್ತ ಮಾರುಕಟ್ಟೆಯಲ್ಲಿ ನೇಂದ್ರಬಾಳೆಹಣ್ಣಿನ ಧಾರಣೆ ಕಿಲೋಗೆ 50ರಿಂದ 55ರೂ. ವರೆಗೆ ತಲುಪಿದೆ.


