ಕುಂಬಳೆ: ಲಾಕ್ ಡೌನ್ ಆದೇಶದ ಹಿನ್ನೆಲೆಯಲ್ಲಿ ಕಿಮೋ ಥೆರಪಿಗೆ ಗತ್ಯಂತರವಿಲ್ಲದೇ ಆದ ಬಾಲಕಿಗೆ ಸೌಲಭ್ಯ ಒದಗಿಸುವ ಮೂಲಕ ರಾಜ್ಯ ಸರಕಾರ ತನ್ನ ಜನಪರ ನೀತಿಯನ್ನು ಖಚಿತಪಡಿಸಿದೆ.
ಜಿಲ್ಲೆಯ ಗ್ರಾಮಾಂತರ ಪ್ರದೇಶವಾಗಿರುವ ಪುತ್ತಿಗೆಯ ಪಳ್ಳ ದಲ್ಲಿ ವಾಸಿಸುತ್ತಿರು ಹಮೀಧ್-ಆಯಿಷತ್ ಮಿಸ್ರ ದಂಪತಿ ಪುತ್ರಿ ಫಾತಿಮತ್ ಷಹಲ(4) ಳಿಗೆ ಸರಕಾರ ಈ ವ್ಯವಸ್ಥೆ ಒದಗಿಸಿದೆ. ಕಣ್ಣಿನಲ್ಲಿ ಅರ್ಬುದ (ಕ್ಯಾನ್ಸರ್) ಹೊಂದಿರುವ ಈಕೆಗೆ ಚೆನೈಯ ಶಂಕರ ನೇತ್ರಾಲಯದಲ್ಲಿ ಕಿಮೋ ಥೆರಪಿ ನಡೆಸಲಾಗುತ್ತಿದೆ. ಆದರೆ ಲಾಕ್ ಡೌನ್ ಆದೇಶ ಜಾರಿಗೊಂಡ ಹಿನ್ನೆಲೆಯಲ್ಲಿ ಈ ಚಿಕಿತ್ಸೆ ಮೊಟಕುಗೊಳ್ಳುವ ಬಗ್ಗೆ ಈ ಕುಟುಂಬ ಭೀತಿಹೊಂದಿತ್ತು. ರಾಜ್ಯ ಯುವಜನ ಕಮೀಷನ್ ಸದಸ್ಯ ಕೆ.ಮಣಿಕಂಠನ್ ಇದನ್ನು ರಾಜ್ಯ ಸರಕಾರದ ಗಮನಕ್ಕೆ ತಂದಿದ್ದರು. ಆರೋಗ್ಯ, ಸಮಾಜನೀತಿ, ಮಹಿಳಾ-ಶಿಶು ಕಲ್ಯಾಣ ಇಲಾಖೆಗಳ ಸಚಿವೆ ಕೆ.ಕೆ.ಶೈಲಜಾ ಟೀಚರ್ ಅವರು ತಕ್ಷಣ ಚಿಕಿತ್ಸೆಗೆ ವ್ಯವಸ್ಥೆ ಮಾಡಿದೆ.
ಇದರ ಅಂಗವಾಗಿ ಮಂಗಳವಾರ(ಏ.21) ಬೆಳಗ್ಗೆ ಆಂಬುಲೆನ್ಸ್ ಮೂಲಕ ಬಾಲಕಿಯನ್ನು ಚೈನೈಯ ಆಸ್ಪತ್ರೆಗೆ ಕರೆದೊಯ್ಯಲಾಗುವುದು ಎಂದು ಸಮಾಜ ಸುರಕ್ಷೆ ಮಿಷನ್ ಜಿಲ್ಲಾ ಸಂಚಾಲಕ ಜಿಷೋ ಜೇಮ್ಸ್ ತಿಳಿಸಿದರು. ಆರ್ಥಿಕ ಮುಗ್ಗಟ್ಟು ಅನುಭವಿಸುತ್ತಿರುವ ಈ ಕುಟುಂಬಕ್ಕೆ ಪ್ರಯಾಣ, ಚಿಕಿತ್ಸೆ, ಔಷಧ ಎಲ್ಲವನ್ನೂ ಸರಕಾರವೇ ಒದಗಿಸಲಿದೆ ಎಂದವರು ತಿಳಿಸಿದರು.

