ಜಿನೇವಾ: ಕೊರೊನಾ ವೈರಸ್ ಚೀನಾದ ಯಾವುದೇ ಪ್ರಯೋಗಾಲಯಗಳು ಹುಟ್ಟುಹಾಕಿದ್ದಲ್ಲ , ಇದು ಪ್ರಾಣಿಗಳಿಂದ ಹರಡಿರುವ ಸೋಂಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಪುನರುಚ್ಚರಿಸಿದೆ. ಕಳೆದ ವಾರವಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾಷಣ ಮಾಡುವಾಗ ಕೊರೊನಾ ವೈರಸ್ ವುಹಾನ್‍ನ ಪ್ರಯೋಗಾಲಯದಲ್ಲಿ ಅಭಿವೃದ್ಧಿ ಪಡಿಸಿದ್ದು, ಅಲ್ಲಿಂದಲೇ ಇಡೀ ವಿಶ್ವಕ್ಕೆ ಹರಡಿದೆ ಎಂದು ಆರೋಪಿಸಿದ್ದರು.
ಇದೀಗ ಲಭ್ಯವಾಗಿರುವ ಸಾಕ್ಷ್ಯಗಳ ಪ್ರಕಾರ ಈ ವೈರಸ್ ಪ್ರಾಣಿಗಳಿಂದ ಬಂದಿದೆ. ಯಾವುದೇ ಲ್ಯಾಬ್‍ಗಳಲ್ಲಿ ತಯಾರಿಸಿದ್ದಲ್ಲ. ವುಹಾನ್‍ನ ಸೂಕ್ಷ್ಮಾಣು ಪ್ರಯೋಗಾಲಯವು ಕೂಡ ವೈರಸ್ ಮಾನವ ನಿರ್ಮಿತವಲ್ಲ ಎಂದು ಹೇಳಿದೆ.
ಲ್ಯಾಬ್ ನಲ್ಲಿ ಕೊರೊನಾ ವೈರಸ್ ಸೃಷ್ಟಿ ಮಾಡಿರುವುದಕ್ಕೆ ಯಾವುದೇ ಪುರಾವೆಗಳು ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಎರಡು ಬಾರಿ ಹೇಳಿದೆ ಎಂದು ಚೀನಾ ತಿಳಿಸಿದೆ. ಇಂದು ಇಡೀ ವಿಶ್ವಕ್ಕೆ ದೊಡ್ಡ ತಲೆನೋವಾಗಿರುವ ಕೊರೊನಾ ವೈರಸ್ ಮೊದಲು ಕಾಣಿಸಿಕೊಂಡಿದ್ದು ಚೀನಾದಲ್ಲಿ. ಕಳೆದ ವರ್ಷ ಡಿಸೆಂಬರ್ ನಲ್ಲಿ ಚೀನಾದ ವುಹಾನ್ ಪ್ರದೇಶದಲ್ಲಿ ಕಾಣಿಸಿಕೊಂಡ ಸೋಂಕು ಇಂದು ವಿಶ್ವವ್ಯಾಪಿ ತನ್ನ ಅಟ್ಟಹಾಸ ಮೆರೆಯುತ್ತಿದೆ. ಆದರೆ ಇದನ್ನು ಚೀನಾ ಬಯೋವೆಪನ್ ಆಗಿ ಬಳಸುತ್ತಿದೆ. ಇದು ಚೀನಾದ ಲ್ಯಾಬ್ ನಲ್ಲಿ ತಯಾರದ ಭಯಾನಕ ವೈರಸ್ ಎಂಬ ಮಾತುಗಳು ಜಾಗತಿಕ ಮಟ್ಟದಲ್ಲಿ ಕೇಳಿ ಬಂದಿದ್ದವು.


