ಪೆರ್ಲ: ಕಲಾಕ್ಷೇತ್ರದ ಧೀಮಂತಿಕೆಗೆ ಕಳಶಪ್ರಾಯವಾದ ಯಕ್ಷಗಾನದ ಸರ್ವತೋಮುಖ ಕಲಿಕೆ, ಅಧ್ಯಯನಕ್ಕೆ ಇಂದು ಎಲ್ಲೆಡೆ ವ್ಯಾಪಕ ಬೇಡಿಕೆ ಕಂಡುಬರುತ್ತಿರುವುದು ಭರವಸೆ ಮೂಡಿಸುತ್ತಿದೆ. ಈ ನಿಟ್ಟಿನಲ್ಲಿ ಗಡಿನಾಡು ಕಾಸರಗೋಡು ಸಹಿತ ಕನ್ನಡ ನಾಡಲ್ಲಿ ಪೆರ್ಲದ ಪಡ್ರೆಚಂದು ಸ್ಮಾರಕ ಯಕ್ಷಗಾನ ಕಲಿಕಾ ಕೇಂದ್ರ ನೂರಾರು ಶಿಷ್ಯಂದಿರನ್ನು ರೂಪಿಸುವ ಮೂಲಕ ಮಹತ್ತರ ಕೊಡುಗೆ ನೀಡುತ್ತಿದೆ ಎಂದು ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ತಿಳಿಸಿದರು.
ಪೆರ್ಲದ ಪಡ್ರೆಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ಹದಿನಾರನೇ ವರ್ಷದ ವಾರ್ಷಿಕೋತ್ಸವ, ಪ್ರಶಸ್ತಿ ಪ್ರದಾನ ಹಾಗೂ ಮಕ್ಕಳ ಯಕ್ಷಗಾನ ಬಯಲಾಟ ಕಾರ್ಯಕ್ರಮದ ಎರಡನೇ ದಿನವಾದ ಶನಿವಾರ ಮಧ್ಯಾಹ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಆಶೀರ್ವಚನ ನೀಡಿದರು.
ಯುವ ತಲೆಮಾರಿಗೆ ಯಕ್ಷಗಾನ ಪರಂಪರೆಯನ್ನು ಪರಿಚಯಿಸಿ, ಅಧ್ಯಯನ ಆಸಕ್ತಿಗೆ ಮಾರ್ಗದರ್ಶನವನ್ನು ಸಮರ್ಥವಾಗಿ ನೀಡುವ ಪರಿಪೂರ್ಣ ಕೇಂದ್ರವಾಗಿ ಪಡ್ರೆಚಂದು ಸ್ಮಾರಕ ಕೇಂದ್ರ ತೆಂಕುತಿಟ್ಟಿಗೆ ಬಲಾಢ್ಯ ನೆಲೆಯನ್ನು ಒದಗಿಸಿದೆ ಎಂದ ಶ್ರೀಗಳು, ಆಧುನಿಕ ತಂತ್ರಜ್ಞಾನ ಯುಗದಲ್ಲಿ ಭಾರತೀಯ ಸಂಸ್ಕøತಿ, ಕಲೆ, ಜೀವನ ಮೌಲ್ಯಗಳನ್ನು ಕಾಪಿಡುವ ಚಟುವಟಿಕೆಗಳು ತುರ್ತು ಆಗಬೇಕು ಎಂದು ಕರೆನೀಡಿದರು. ವ್ಯಕ್ತಿಯ ವ್ಯಕ್ತಿತ್ವವನ್ನು ಬೆಳೆಸುವ, ಶಕ್ತಿಯಾಗಿ ಬೆಳಗುವ ಸಾಮಥ್ರ್ಯ ಯಕ್ಷಗಾನ ಕಲೆಯ ಮಹತ್ವಿಕೆಯಾಗಿದ್ದು, ಯಕ್ಷಗಾನದ ಎಲ್ಲಾ ಆಯಾಮಗಳಿಗೂ ಶಾಸ್ತ್ರೀಯತೆ ಇದೆ ಎಂದು ತಿಳಿಸಿದರು.
ಉಪನ್ಯಾಸಕ, ಯಕ್ಷಗಾನ ಕಲಾವಿದ ಕೆ.ರಾಮಚಂದ್ರ ಭಟ್ ಪನೆಯಾಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಕೀರ್ಣ ಸ್ವಭಾವದ ಎಳೆಯ ಹರೆಯದವರಿಗೆ ಶಾಸ್ತ್ರೀಯ ವ್ಯವಸ್ಥೆಯಡಿ ಯಕ್ಷಗಾನದ ಕಲಿಕೆಗೆ ಅವಕಾಶ ನೀಡುವ ಕೇಂದ್ರವು ಭವಿಷ್ಯದ ಶ್ರೀಮಂತ ಕಲಾ ಪ್ರಪಂಚಕ್ಕೆ ಮಹತ್ತರ ಕೊಡುಗೆಗಳನ್ನು ನೀಡುತ್ತಿರುವುದು ಕಾಸರಗೋಡಿನ ಸೌಭಾಗ್ಯ ಎಂದರು. ಸಹನೆ, ತ್ಯಾಗಗಳ ಮೂಲಕ ಕಲಾವಿದ್ಯೆಯನ್ನು ಧಾರೆಯೆರೆಯುವ ಸಬ್ಬಣಕೋಡಿ ರಾಮ ಭಟ್ ಕಲಾಸಾಧಕ ಎಂದು ಬಣ್ಣಿಸಿದರು.
ಹಿರಿಯ ಮದ್ದಳೆಗಾರ ಚಂದ್ರಶೇಖರ ಭಟ್ ಕೊಂಕಣಾಜೆ, ಶಿಕ್ಷಕ ದೇವದಾಸ್ ಅರ್ಕುಳ, ಅರವಿಂದ ಕೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಸಾಹಿತಿ ಶಾಂತಾ ರವಿ ಕುಂಟಿನಿ ಉಪಸ್ಥಿತರಿದ್ದರು. ಈ ಸಂದರ್ಭ ಹಿರಿಯ ಯಕ್ಷಗಾನ ಕಲಾವಿದ ಕೃಷ್ಣ ಗಾಣಿಗ ಅವರಿಗೆ ಪಡ್ರೆಚಂದು ಪ್ರಶಸ್ತಿ, ಮಂಜುನಾಥ ಭಟ್ ಬೆಳ್ಳಾರೆ ಅವರಿಗೆ ಅಡ್ಕಸ್ಥಳ ಪ್ರಶಸ್ತಿ, ಶಂಭು ಶರ್ಮ ವಿಟ್ಲ ಅವರಿಗೆ ವಿಶೇಷ ಪ್ರಶಸ್ತಿ, ಪದ್ಯಾಣ ಗಣಪತಿ ಭಟ್ ಅವರಿಗೆ ತೆಂಕಬೈಲು ಪ್ರಶಸ್ತಿ, ಪದ್ಯಾಣ ಶಂಕರನಾರಾಯಣ ಭಟ್ ಅವರಿಗೆ ಕಾಮತ್ ಪ್ರಶಸ್ತಿ, ಜಯಂತ ಜೋಗಿ ಅವರಿಗೆ ದೇವಕಾನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕೋಟೆ ರಾಮ ಭಟ್ ಅಭಿನಂದನಾ ಭಾಷಣ ಮಾಡಿದರು.ಬಾಲಕೃಷ್ಣ ಏಳ್ಕಾನ ವರದಿ ವಾಚಿಸಿದರು. ಕೇಂದ್ರದ ನಿರ್ದೇಶಕ ರಾಮ ಭಟ್ ಸಬ್ಬಣಕೋಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿ, ವಂದಿಸಿದರು. ಉದಯಕುಮಾರ್ ಸ್ವರ್ಗ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಕೇಂದ್ರದ ವಿದ್ಯಾರ್ಥಿಗಳಿಂದ ಮೇದಿನಿ ನಿರ್ಮಾಣ ಮಹಿಷ ವಧೆ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಿತು. ಬೆಳಿಗ್ಗೆ ಕೇಂದ್ರದ ವಿದ್ಯಾರ್ಥಿಗಳಿಂದ ಪೂರ್ವರಂಗ, ಯಕ್ಷಗಾನ ಬಯಲಾಟ ಪಾಂಚಜನ್ಯ ಪ್ರದರ್ಶನಗೊಂಡಿತು. ಇಂದು(ಫೆ.28) ಬೆಳಿಗ್ಗೆ 10.30ಕ್ಕೆ ಪಂಚವಟಿ ಆಖ್ಯಾಯಿಕೆಯ ಬಯಲಾಟ, ಮಧ್ಯಾಹ್ನ 2.30 ರಿಂದ ಸುಂದೋಪಸುಂದ, 4.30 ರಿಂದ ಕೃಷ್ಣಾರ್ಜುನ ಕಾಳಗ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಲಿದೆ.







